×
Ad

ವಿಚಾರಣೆಯಿಲ್ಲದೆ ಕೈದಿಯನ್ನು ಜೈಲಿನಲ್ಲಿಡುವುದು ವಿಚಾರಣಾಪೂರ್ವ ಶಿಕ್ಷೆಗೆ ಸಮನಾಗಿರುತ್ತದೆ: ಬಾಂಬೆ ಹೈಕೋರ್ಟ್

Update: 2025-05-11 15:55 IST

ಬಾಂಬೆ ಹೈಕೋರ್ಟ್ | PTI 

ಮುಂಬೈ: ವಿಚಾರಣೆಯಿಲ್ಲದೆ ಕೈದಿಯನ್ನು ದೀರ್ಘಕಾಲ ಬಂಧನದಲ್ಲಿರಿಸುವುದು ವಿಚಾರಣಾಪೂರ್ವ ಶಿಕ್ಷೆಗೆ ಸಮನಾಗಿರುತ್ತದೆ ಎಂದು ಅಭಿಪ್ರಾಯಿಸಿರುವ ಬಾಂಬೆ ಉಚ್ಚ ನ್ಯಾಯಾಲಯವು, ಜಾಮೀನು ತತ್ವವು ನಿಯಮವಾಗಿದೆ ಮತ್ತು ನಿರಾಕರಣೆಯು ಒಂದು ಅಪವಾದವಾಗಿದೆ ಎಂದು ಒತ್ತಿ ಹೇಳಿದೆ.

ಮೇ 9ರಂದು ಜಾಮೀನು ಅರ್ಜಿಯೊಂದರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾ.ಮಿಲಿಂದ ಜಾಧವ ಅವರ ಪೀಠವು ರಾಜ್ಯದಲ್ಲಿ ಕಿಕ್ಕಿರಿದು ತುಂಬಿರುವ ಜೈಲುಗಳನ್ನು ಗಮನಕ್ಕೆ ತೆಗೆದುಕೊಂಡಿತು ಮತ್ತು ನ್ಯಾಯಾಲಯಗಳು ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಹೇಳಿತು.

2018ರಲ್ಲಿ ತನ್ನ ಸೋದರನನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಬಂಧನದಲ್ಲಿರುವ ವಿಕಾಸ ಪಾಟೀಲ್ ಎಂಬಾತನಿಗೆ ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.

ಇತ್ತೀಚಿನ ದಿನಗಳಲ್ಲಿ ವಿಚಾರಣೆಗಳು ಅಂತ್ಯಗೊಳ್ಳಲು ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತಿವೆ ಮತ್ತು ಕೆಲವು ವಿಭಾಗಗಳಲ್ಲಿ ಜೈಲುಗಳು ಏಕಕಾಲದಲ್ಲಿ ಕಿಕ್ಕಿರಿದು ತುಂಬಿರುತ್ತವೆ ಎಂದು ನ್ಯಾ.ಜಾಧವ ಬೆಟ್ಟು ಮಾಡಿದರು.

ವಿಚಾರಣಾಧೀನ ಕೈದಿಗಳು ದೀರ್ಘಕಾಲದಿಂದ ಬಂಧನದಲ್ಲಿರುವ ಪ್ರಕರಣಗಳು ತನ್ನ ಮುಂದೆ ನಿಯಮಿತವಾಗಿ ಬರುತ್ತಿರುತ್ತವೆ ಮತ್ತು ಜೈಲುಗಳ ಸ್ಥಿತಿಯ ಬಗ್ಗೆ ತನಗೆ ತಿಳಿದಿದೆ ಎಂದು ಪೀಠವು ಹೇಳಿತು.

ಮುಂಬೈನ ಆರ್ಥರ್ ರೋಡ್ ಜೈಲಿನ ಅಧೀಕ್ಷಕರ ಡಿಸೆಂಬರ್ 2024ರ ವರದಿಯನ್ನು ಉಲ್ಲೇಖಿಸಿದ ನ್ಯಾ.ಜಾಧವ ಅವರು,ಅದು ಮಂಜೂರಾಗಿರುವ ಸಾಮರ್ಥ್ಯದ ಆರು ಪಟ್ಟು ಕೈದಿಗಳನ್ನು ಹೊಂದಿದೆ. ಪ್ರತಿ ಬ್ಯಾರಕ್‌ನಲ್ಲಿ ಕೇವಲ 50 ಕೈದಿಗಳನ್ನು ಇರಿಸಬಹುದಾದರೂ ಇಂದು 200ರಿಂದ 250 ಕೈದಿಗಳಿದ್ದಾರೆ ಎಂದು ಹೇಳಿದರು.

ಇವು ದೀರ್ಘಕಾಲದಿಂದ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಾಗಿದ್ದು,ಇದು ತ್ವರಿತ ನ್ಯಾಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಅವರ ಸಾಂವಿಧಾನಿಕ ಹಕ್ಕಿನ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ನ್ಯಾಯಾಲಯವು ಹೇಳಿತು.

ಕೇವಲ ದೀರ್ಘಕಾಲಿಕ ಸೆರೆವಾಸವು ಜಾಮೀನು ಕೋರಿಕೆಯನ್ನು ಸಂಪೂರ್ಣವಾಗಿ ಪ್ರತಿಪಾದಿಸಲು ಸಾಧ್ಯವಿಲ್ಲ,ಇದು ತ್ವರಿತ ವಿಚಾರಣೆಯ ಹಕ್ಕಿನ ಜೊತೆಗೆ ಪರಿಗಣನೆ ಅಗತ್ಯವಿರುವ ಪ್ರಮುಖ ವಿಷಯವಾಗಿದೆ ಎಂದು ಪೀಠವು ಹೇಳಿತು.

ಪ್ರಾಸಿಕ್ಯೂಷನ್‌ನ ಮನಃಸ್ಥಿತಿ ಮತ್ತು ಅದು ಅನುಸರಿಸುತ್ತಿರುವ ವಿಧಾನದಲ್ಲಿ ಬದಲಾವಣೆಗೂ ಕರೆ ನೀಡಿದ ಪೀಠವು,ವಿಚಾರಣೆಗೆ ಬಾಕಿಯಿರುವ ದೀರ್ಘ ಜೈಲುವಾಸದ ಪ್ರಕರಣಗಳಲ್ಲಿಯೂ ಪ್ರಾಸಿಕ್ಯೂಟರ್‌ಗಳು ಅಪರಾಧವು ಗಂಭೀರವಾಗಿದೆ ಮತ್ತು ಹೀಗಾಗಿ ಜಾಮೀನನ್ನು ನೀಡಕೂಡದು ಎಂಬ ಪೂರ್ವಾಗ್ರಹದೊಂದಿಗೆ ಜಾಮೀನು ಅರ್ಜಿಗಳನ್ನು ಹೇಗೆ ಬಲವಾಗಿ ವಿರೋಧಿಸುತ್ತಾರೆ ಎನ್ನುವುದನ್ನು ಉಲ್ಲೇಖಿಸಿತು.

ಕಾನೂನು ಎಷ್ಟೇ ಕಠಿಣವಾಗಿದ್ದರೂ ಆರೋಪಿಯ ತಪ್ಪು ಸಾಬೀತಾಗುವವರೆಗೂ ಆತನನ್ನು ನಿರಪರಾಧಿ ಎಂದು ಭಾವಿಸಲಾಗುತ್ತದೆ ಎಂಬ ಅಪರಾಧ ನ್ಯಾಯಶಾಸ್ತ್ರದ ನಿಲುವನ್ನು ಹಗುರವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ನ್ಯಾ.ಜಾಧವ ಹೇಳಿದರು.

ಪ್ರಸ್ತುತ ಪ್ರಕರಣದಲ್ಲಿ ಆರೋಪಿಯು ಆರು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾನೆ ಮತ್ತು ಸದ್ಯೋಭವಿಷ್ಯದಲ್ಲಿ ವಿಚಾರಣೆಯು ಆರಂಭಗೊಳ್ಳುವ ಅಥವಾ ಮುಕ್ತಾಯಗೊಳ್ಳುವ ಯಾವುದೇ ಸಾಧ್ಯತೆಯು ಕಂಡು ಬರುತ್ತಿಲ್ಲ ಎಂದು ನ್ಯಾಯಾಲಯವು ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News