ಗಡಿಗಳು ಕಾಯಂ ಅಲ್ಲ; ಸಿಂಧ್ ಭಾರತಕ್ಕೆ ಮರಳಬಹುದು: ರಾಜ್‌ನಾಥ್ ಸಿಂಗ್
PC: PTI
ಹೊಸದಿಲ್ಲಿ: ಮಾಜಿ ಉಪಪ್ರಧಾನಿ ಎಲ್ ಕೆ ಆಡ್ವಾಣಿಯವರು ಹಿಂದೆ ನೀಡಿದ್ದ "ಗಡಿಗಳು ಎಂದೂ ಕಾಯಂ ಅಲ್ಲ; ಸಿಂಧ್ ಪ್ರದೇಶ ಮತ್ತೆ ಭಾರತಕ್ಕೆ ಮರಳಬಹುದು" ಎಂಬ ಹೇಳಿಕೆಯನ್ನು ರಕ್ಷಣಾಸಚಿವ ರಾಜನಾಥ್ ಸಿಂಗ್ ಭಾನುವಾರ ಪುನರುಚ್ಚರಿಸಿದರು.
ಸಿಂಧಿ ಜನರ ತಾಯ್ನಾಡು ಎನಿಸಿದ ಸಿಂಧ್ ಪ್ರಾಂತ್ಯ ಭಾರತದ ನಾಗರೀಕತೆಯ ಮಹತ್ವದ ಭಾಗವಾಗಿದ್ದು, ಸಿಂಧೂ ಕಣಿವೆ ನಾಗರೀಕತೆಯ ಕೇಂದ್ರಸ್ಥಾನವಾಗಿತ್ತು. 1947ರಲ್ಲಿ ಭಾರತ ವಿಭಜನೆಯಾದ ಸಂದರ್ಭದಲ್ಲಿ ಇದು ಪಾಕಿಸ್ತಾನಕ್ಕೆ ಸೇರಿತ್ತು.
ದೆಹಲಿಯಲ್ಲಿ ನಡೆದ ಸಿಂಧಿ ಸಮಾಜ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, "ಇದು ಆಡ್ವಾಣಿಯವರ ಹೇಳಿಕೆ. ಇಂದು ಸಿಂಧ್ ಪ್ರಾಂತ್ಯದ ನೆಲ ಭಾರತದ ಭಾಗವಾಗಿ ಉಳಿದಿಲ್ಲ; ಆದರೆ ನಾಗರೀಕತೆಯ ಆಧಾರದಲ್ಲಿ ಸಿಂಧ್ ಸದಾ ಭಾರತದ ಭಾಗವಾಗಿದೆ. ಈ ಭೂಮಿಗೆ ಸಂಬಂಧಿಸಿದಂತೆ ಗಡಿಗಳು ಬದಲಾಗಬಹುದು; ಯಾರಿಗೆ ಗೊತ್ತು, ನಾಳೆ ಸಿಂಧ್ ಭಾರತಕ್ಕೆ ಮತ್ತೆ ಮರಳಬಹುದು" ಎಂದು ಹೇಳಿದರು.
ಭಾರತದ ನಾಗರೀಕತೆಯಲ್ಲಿ ಈ ಪ್ರದೇಶದ ಸಾಂಸ್ಕೃತಿಕ ಮಹತ್ವವನ್ನು ಕೂಡ ರಾಜನಾಥ್ ಸಿಂಗ್ ಒತ್ತಿ ಹೇಳಿದರು.