ಪಾಕಿಸ್ತಾನದ ಐಎಸ್ಐ ಪರ ಬೇಹುಗಾರಿಕೆ ಆರೋಪ: 15 ವರ್ಷದ ಬಾಲಕನನ್ನು ಬಂಧಿಸಿದ ಪಂಜಾಬ್ ಪೊಲೀಸರು
ಸಾಂದರ್ಭಿಕ ಚಿತ್ರ (Grok-AI)
ಹೊಸದಿಲ್ಲಿ: ಪಾಕಿಸ್ತಾನದ ಐಎಸ್ಐ ಪರ ಬೇಹುಗಾರಿಕೆ ಆರೋಪದಲ್ಲಿ ಪಂಜಾಬ್ ಪೊಲೀಸರು 15 ವರ್ಷದ ಬಾಲಕನನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಈ ಪ್ರಕರಣವು ಗಂಭೀರ ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ.
ಅಪ್ರಾಪ್ತ ಬಾಲಕ ಸುಮಾರು ಒಂದು ವರ್ಷದಿಂದ ಪಾಕಿಸ್ತಾನದಲ್ಲಿರುವ ಐಎಸ್ಐ ಜೊತೆ ಸಂಪರ್ಕದಿಂದಿದ್ದ ಎಂಬುದನ್ನು ಪತ್ತೆ ಹಚ್ಚಿದ ಬಳಿಕ ಪಠಾಣ್‌ಕೋಟ್ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬಾಲಕ ಮೊಬೈಲ್ ಫೋನ್ ಮೂಲಕ ಭಾರತಕ್ಕೆ ಸಂಬಂಧಿಸಿದ ಪ್ರಮುಖ ಮತ್ತು ಸೂಕ್ಷ್ಮ ಮಾಹಿತಿಯನ್ನು ಪಾಕ್ ಏಜೆಂಟ್‌ಗಳ ಜೊತೆ ಹಂಚಿಕೊಳ್ಳುತ್ತಿದ್ದ.
ಜಮ್ಮುವಿನ ಸಾಂಬಾ ಜಿಲ್ಲೆಯ ನಿವಾಸಿಯಾಗಿರುವ ಅಪ್ರಾಪ್ತ ಬಾಲಕನನ್ನು ಪಾಕ್ ಏಜೆಂಟ್‌ಗಳ ಜೊತೆ ಸಂಪರ್ಕದ ಕುರಿತು ಕಣ್ಗಾವಲು ಮತ್ತು ತಾಂತ್ರಿಕ ಪರಿಶೀಲನೆ ಬಳಿಕ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಠಾಣ್‌ಕೋಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದಲ್ಜಿಂದರ್ ಸಿಂಗ್ ಧಿಲ್ಲೋನ್, ಬಂಧಿತ ಬಾಲಕ 15 ವರ್ಷ ವಯಸ್ಸಿನವನಾಗಿದ್ದು, ಪಾಕಿಸ್ತಾನದಲ್ಲಿರುವ ಐಎಸ್ಐ ಏಜೆಂಟ್‌ಗಳ ಜೊತೆ ಸಂಪರ್ಕದಲ್ಲಿದ್ದ ಎನ್ನುವುದು ತನಿಖೆಯ ವೇಳೆ ತಿಳಿದು ಬಂದಿದೆ. ಪಂಜಾಬ್‌ನ ವಿವಿಧ ಜಿಲ್ಲೆಗಳಲ್ಲಿ ಹಲವಾರು ಅಪ್ರಾಪ್ತ ವಯಸ್ಕರು ಐಎಸ್ಐ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರುವ ಶಂಕೆ ಇದೆ. ಪಂಜಾಬ್‌ನ ಇತರ ಪೊಲೀಸ್ ಠಾಣೆಗಳಿಗೂ ಈ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.