ಸೈನಿಕರ ಮೇಲೆ ಬ್ರಿಗೇಡಿಯರ್‌ನಿಂದ ಹಲ್ಲೆ ಆರೋಪ: ತನಿಖೆಗೆ ಸೇನೆ ಆದೇಶ
ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ತನ್ನ ಅಧಿಕೃತ ನಿವಾಸದಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ಸೈನಿಕರ ಮೇಲೆ ಸೇನಾಧಿಕಾರಿಯೊಬ್ಬರು ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆಯ ಬಗ್ಗೆ ಸೇನೆಯು ತನಿಖೆಗೆ ಆದೇಶ ನೀಡಿದೆ.
‘‘ಪೂಂಚ್ ಜನರಲ್ ಏರಿಯದಲ್ಲಿರುವ ವಿಭಾಗ ಪ್ರಧಾನಕಚೇರಿಯಲ್ಲಿ ನಡೆದಿದೆ ಎನ್ನಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ನ್ಯಾಯೋಚಿತ, ಪಾರದರ್ಶಕ ಹಾಗೂ ಕ್ಷಿಪ್ರ ತನಿಖೆ ನಡೆಸುವುದಕ್ಕೆ ಸೇನೆ ಬದ್ಧವಾಗಿದೆ. ತನಿಖೆಯ ಬಳಿಕ, ಕ್ಷಿಪ್ರ ಹಾಗೂ ನ್ಯಾಯೋಚಿತ ಪ್ರಕ್ರಿಯೆಯ ಮೂಲಕ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಒಟ್ಟಾರೆ ಪರಿಸ್ಥಿತಿಯು ಸಾಮಾನ್ಯವಾಗಿದೆ ಹಾಗೂ ನಿಯಂತ್ರಣದಲ್ಲಿದೆ. ಸೇನಾ ತುಕಡಿಯು ತನ್ನ ನಿಗದಿತ ಕಾರ್ಯಾಚರಣೆಯನ್ನು ಹಿಂದಿನಂತೆಯೇ ನಡೆಸುತ್ತಾ ಬಂದಿದೆ’’ ಎಂದು ಜಮ್ಮುವಿನಲ್ಲಿರುವ ಸೇನಾ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಬ್ರಿಗೇಡ್ ಕಮಾಂಡರ್‌ರ ಅಧಿಕೃತ ನಿವಾಸದಲ್ಲಿ ಸೇವೆಗಾಗಿ ನಿಯೋಜಿಸಲಾಗಿದ್ದ ವಿವಿಧ ರಾಷ್ಟ್ರೀಯ ರೈಫಲ್ಸ್ ತುಕಡಿಗಳ ಸೈನಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬ್ರಿಗೇಡಿಯರ್ ತನ್ನ ಅಡುಗೆಯಾಳಿಗೆ ಆತನ ಮಲಗುವ ಕೋಣೆಯಲ್ಲಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಬದಲಿಗೆ ಬಂದ ಇನ್ನೋರ್ವ ಅಡುಗೆಯಾಳಿಗೂ ಅದೇ ರೀತಿ ಹೊಡೆಯಲಾಗಿದೆ ಎನ್ನಲಾಗಿದೆ. ಬ್ರಿಗೇಡಿಯರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇತರ ಸೈನಿಕರಿಗೂ ಹೊಡೆಯಲಾಗಿದೆ ಹಾಗೂ ಪೆಟ್ಟು ತಿಂದ ಬಳಿಕ ಅವರು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಅವರಿಗೆ ಹೊಡೆಯಲು ಬ್ರಿಗೇಡಿಯರ್ ಓರ್ವ ಹವಲ್ದಾರ್‌ಗೆ ಸೂಚಿಸಿದ್ದರು, ಆದರೆ, ಹೊಡೆಯಲು ಹೋದ ಹವಲ್ದಾರನೇ ಪೆಟ್ಟು ತಿಂದನು ಎಂಬ ಆರೋಪಗಳ ಬಗ್ಗೆ ತನಿಖೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.