ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದಗಳನ್ನು ತೊಳೆಯುತ್ತಿರುವ ಮಹಿಳೆಯರ ವೀಡಿಯೊ ವೈರಲ್!
Credit: X/@kishanreddybjp
ಹೈದರಾಬಾದ್: ರಾಮಪ್ಪ ದೇವಾಲಯದಲ್ಲಿ ಕೆಲವು ಮಹಿಳೆಯರು ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದಗಳನ್ನು ತೊಳೆಯುತ್ತಿರುವ ವೀಡಿಯೊ ಗುರುವಾರ ವಿವಾದಕ್ಕೆ ಕಾರಣವಾಗಿದ್ದು, ಈ ಕೃತ್ಯವನ್ನು ತೆಲಂಗಾಣ ಮಹಿಳೆಯರಿಗಾಗಿರುವ ಅವಮಾನವೆಂದು ಪ್ರಮುಖ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಸಮಿತಿ ತರಾಟೆಗೆ ತೆಗೆದುಕೊಂಡಿದೆ.
ಬುಧವಾರ ತೆಲಂಗಾಣ ರಾಜ್ಯದಲ್ಲಿ ಕೈಗೊಂಡಿರುವ ತಮ್ಮ ಪಾರಂಪರಿಕ ಪ್ರವಾಸದ ಭಾಗವಾಗಿ ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾದ ಐತಿಹಾಸಿಕ ರಾಮಪ್ಪ ದೇವಾಲಯಕ್ಕೆ ಸೀರೆಯುಟ್ಟ ಮಿಸ್ ವರ್ಲ್ಡ್ ಸ್ಪರ್ಧಿಗಳು ಭೇಟಿ ನೀಡಿದ್ದರು.
ಅವರು ರಾಮಪ್ಪ ದೇವಾಲಯ ತಾಣವನ್ನು ತಲುಪಿದ ನಂತರ, ಕೆಲವು ಮಹಿಳೆಯರು ಸೀರೆಯುಟ್ಟ ಸಾಲಿನಲ್ಲಿ ಕುಳಿತಿದ್ದ ಮಿಸ್ ವರ್ಲ್ಡ್ ಸ್ಪರ್ಧಿಗಳ ಕಾಲಿಗೆ ನೀರು ಎರೆದು, ಪಾದಗಳನ್ನು ತೊಳೆದರು. ಈ ಪೈಕಿ ಓರ್ವ ಮಹಿಳೆಯು ಮಿಸ್ ವರ್ಲ್ಡ್ ಸ್ಪರ್ಧಿಯೊಬ್ಬರ ಕಾಲುಗಳನ್ನು ಟವೆಲ್ ಒಂದರಿಂದ ಒರೆಸುತ್ತಿರುವುದು ಕಂಡು ಬಂದಿತ್ತು. ಈ ವೀಡಿಯೊ ತಕ್ಷಣವೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಬಿ ಆರ್ ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್, “ಕಾಂಗ್ರೆಸ್ ಮುಖ್ಯಮಂತ್ರಿ ಅಧಿಕೃತವಾಗಿ ತಮ್ಮ ಸ್ಥಿಮಿತ ಕಳೆದುಕೊಂಡಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
Congress CM has officially lost his mind https://t.co/oPXT15IcW5
— KTR (@KTRBRS) May 15, 2025
ಮಾಜಿ ಸಚಿವೆ ಹಾಗೂ ಬಿ ಆರ್ ಎಸ್ ಶಾಸಕಿ ಸಬಿತಾ ಇಂದ್ರಾ ರೆಡ್ಡಿ ಕೂಡಾ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ವೀರ ಮಹಿಳೆಯರಾದ ರುದ್ರಮದೇವಿ, ಸುಮಕ್ಕ ಹಾಗೂ ಸರಳಕ್ಕರಂತಹ ವೀರ ಮಹಿಳೆಯರಿಗೆ ಜನ್ಮ ನೀಡಿದ ನೆಲವಾದ ತೆಲಂಗಾಣದ ಮಹಿಳೆಯರಿಗೆ ಮಾಡಿರುವ ಭಾರಿ ಅಪಮಾನವಿದು ಎಂದು ಟೀಕಿಸಿದ್ದಾರೆ.
“ಕಾಂಗ್ರೆಸ್ ಸರಕಾರವು ರಾಜ್ಯದ ಮಹಿಳೆಯರ ಗೌರವವನ್ನು ಹರಾಜು ಹಾಕಿದೆ. ಈ ಘಟನೆಯು ತೆಲಂಗಾಣ ರಾಜ್ಯಕ್ಕೆ ಮಾತ್ರ ನಾಚಿಕೆಯನ್ನುಂಟು ಮಾಡಿಲ್ಲ, ಬದಲಿಗೆ ವಿಶ್ವದೆದುರು ಭಾರತೀಯ ಮಹಿಳೆಯರ ಘನತೆಗೂ ಕುಂದು ತಂದಿದೆ” ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಮೇ 31ರಂದು ತೆಲಂಗಾಣದಲ್ಲಿ ಮಿಸ್ ವರ್ಲ್ಡ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. 100ಕ್ಕೂ ಹೆಚ್ಚು ಮಿಸ್ ವರ್ಲ್ಡ್ ಸ್ಪರ್ಧಿಗಳು ರಾಜ್ಯದ್ಯಂತ ಇರುವ ಹಲವಾರು ಪ್ರಮುಖ ಆಕರ್ಷಣೆಯ ಸ್ಥಳಗಳಿಗೆ ಪ್ರವಾಸ ಮಾಡುತ್ತಿದ್ದಾರೆ.