ಬಜೆಟ್ 2025: ತೆರಿಗೆ ಇಳಿಕೆಯತ್ತ ಮಧ್ಯಮ ವರ್ಗದ ನಿರೀಕ್ಷೆ
PC : PTI
ಹೊಸದಿಲ್ಲಿ: 2025-26ನೇ ಸಾಲಿನ ಕೇಂದ್ರ ಮುಂಗಡಪತ್ರ ಮಂಡನೆಯ ಮುನ್ನಾ ದಿನವಾದ ಶುಕ್ರವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮಧ್ಯಮ ವರ್ಗ,ಬಡವರು ಮತ್ತು ಮಹಿಳೆಯರನ್ನು ಉಲ್ಲೇಖಿಸಿದರಲ್ಲದೆ,ಈ ಗುಂಪುಗಳಿಗಾಗಿ ಹಲವಾರು ಸುಧಾರಣೆಗಳನ್ನು ಮತ್ತು ಕ್ರಮಗಳನ್ನು ಸರಕಾರವು ಪರಿಚಯಿಸಬಹುದು ಎಂಬ ಸುಳಿವು ನೀಡಿದರು.
‘ಬಡವರು ಮತ್ತು ಮಧ್ಯಮ ವರ್ಗಗಳನ್ನು ಆಶೀರ್ವದಿಸುವಂತೆ ನಾನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಲಕ್ಷ್ಮೀದೇವಿಯನ್ನು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ ಮೋದಿ,‘ನವೀನತೆ,ಆರ್ಥಿಕ ಸೇರ್ಪಡೆ ಮತ್ತು ಹೂಡಿಕೆ’ ಪದಗಳನ್ನು ಪ್ರಸ್ತಾವಿಸಿ ಸರಕಾರವು ಈ ಉದ್ದೇಶಿತ ಗುಂಪುಗಳಿಗಾಗಿ ಆರ್ಥಿಕ ಮತ್ತು ತೆರಿಗೆ ಪರಿಹಾರಗಳನ್ನು ಕೇಂದ್ರೀಕರಿಸಿ ಯೋಜನೆಗಳನ್ನು ತರುವ ಸಾಧ್ಯತೆಯಿದೆ ಎಂದು ಪರೋಕ್ಷವಾಗಿ ಸೂಚಿಸಿದರು.
ಬಲ್ಲ ಮೂಲಗಳ ಪ್ರಕಾರ ದೇಶದ ಮಧ್ಯಮ ವರ್ಗದ ಜನತೆ ನೂತನ ಆದಾಯ ತೆರಿಗೆ ವ್ಯವಸ್ಥೆಯಡಿ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಬಹುದು.
ಸರಕಾರವು 15 ಲ.ರೂ.ಮತ್ತು 18.ಲ.ರೂ.ಗಳ ನಡುವಿನ ಆದಾಯಗಳ ಮೇಲೆ ಹೆಚ್ಚುವರಿ ಶೇ.25ರಷ್ಟು ತೆರಿಗೆ ದರವನ್ನು ಪರಿಚಯಿಸಬಹುದು ಮತ್ತು 18 ಲ.ರೂ.ಗೂ ಅಧಿಕ ಆದಾಯಕ್ಕೆ ಶೇ.30ರಷ್ಟು ತೆರಿಗೆ ದರವನ್ನು ವಿಧಿಸಬಹುದು.
ಹೊಸ ತೆರಿಗೆ ವ್ಯವಸ್ಥೆಯಡಿ ಸರಕಾರವು ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್)ಗೆ ವೈಯಕ್ತಿಕ ವಂತಿಗೆಗಳಿಗೆ ತೆರಿಗೆ ವಿನಾಯಿತಿಯನ್ನು ನೀಡಬಹುದು ಎಂದೂ ನಿರೀಕ್ಷಿಸಲಾಗಿದೆ. ಇದು ಮಧ್ಯಮ ವರ್ಗದವರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲು ನೆರವಾಗುತ್ತದೆ ಮತ್ತು ಅವರ ಬಳಕೆ ಮಟ್ಟಗಳನ್ನು ಹೆಚ್ಚಿಸುತ್ತದೆ.
ಅಲ್ಲದೆ ನೂತನ ತೆರಿಗೆ ವ್ಯವಸ್ಥೆಯಡಿ ಮೂಲ ವಿನಾಯಿತಿ ಮಿತಿಯನ್ನು ಮೂರು ಲ.ರೂ.ಗಳಿಂದ ಐದು ಲ.ರೂ.ಗಳಿಗೆ ಹೆಚ್ಚಿಸುವ ಸಾಧ್ಯತೆಯಿದೆ.
ಮೋದಿ ಮಹಿಳಾ ಸಬಲೀಕರಣವನ್ನೂ ಪ್ರಸ್ತಾಪಿಸಿದ್ದು,ಈ ಹಿನ್ನೆಲೆಯಲ್ಲಿ ಮುಂಗಡಪತ್ರದಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಲವಾರು ಯೋಜನೆಗಳು,ಉಪಕ್ರಮಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳ ಘೋಷಣೆಯನ್ನು ನಿರೀಕ್ಷಿಸಲಾಗಿದೆ.