×
Ad

ಬಜೆಟ್ 2025 | ಇಂಧನ ಪರಿವರ್ತನೆಗಾಗಿ 2047ರ ವೇಳೆಗೆ 100 ಗಿಗಾ ವ್ಯಾಟ್ ಪರಮಾಣು ಶಕ್ತಿ ಉತ್ಪಾದನೆ

Update: 2025-02-01 20:33 IST

ಸಾಂದರ್ಭಿಕ ಚಿತ್ರ | ANI 

ಹೊಸದಿಲ್ಲಿ: ಸರಕಾರವು ಇಂಧನ ಪರಿವರ್ತನೆಗಾಗಿ 2047ರ ವೇಳೆಗೆ ಕನಿಷ್ಠ 100 ಗಿಗಾ ವ್ಯಾಟ್ ಪರಮಾಣು ಶಕ್ತಿ ಉತ್ಪಾದನೆಯ ಗುರಿಯನ್ನು ಹೊಂದಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಖಾಸಗಿ ಸಹಭಾಗಿತ್ವದಲ್ಲಿ ಈ ಪರಮಾಣು ಶಕ್ತಿ ಸ್ಥಾವರಗಳನ್ನು ಸ್ಥಾಪಿಸಲಾಗುವುದು ಎಂದು ತನ್ನ ಬಜೆಟ್ ಭಾಷಣದಲ್ಲಿ ತಿಳಿಸಿದ ಅವರು,ನಮ್ಮ ಇಂಧನ ಪರಿವರ್ತನೆ ಪ್ರಯತ್ನಗಳಿಗೆ 2047ರ ವೇಳೆಗೆ ಕನಿಷ್ಠ 100 ಗಿಗಾ ವ್ಯಾಟ್ ಪರಮಾಣು ಶಕ್ತಿಯ ಉತ್ಪಾದನೆ ಅಗತ್ಯವಿದೆ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಖಾಸಗಿ ಕ್ಷೇತ್ರದೊಂದಿಗೆ ಸಕ್ರಿಯ ಪಾಲುದಾರಿಕೆಗಾಗಿ ಅಣುಶಕ್ತಿ ಕಾಯ್ದೆ ಮತ್ತು ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಗುವುದು ಎಂದು ಹೇಳಿದರು.

ಸೀತಾರಾಮನ್ ಅವರು ಸಣ್ಣ ಮಾಡ್ಯುಲರ್ ರಿಯಾಕ್ಟರ್(ಎಸ್‌ಎಂಆರ್)ಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಪರಮಾಣು ಶಕ್ತಿ ಮಿಷನ್ ಯೋಜನೆಯನ್ನೂ ಪ್ರಕಟಿಸಿದರು. 2033ರ ವೇಳೆಗೆ ಕನಿಷ್ಠ ಐದು ದೇಶಿಯ ನಿರ್ಮಿತ ಎಸ್‌ಎಂಆರ್‌ಗಳನ್ನು ಕಾರ್ಯಾರಂಭಗೊಳಿಸುವ ಗುರಿಯೊಂದಿಗೆ ಈ ಮಿಷನ್‌ಗೆ 20,000 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗುವುದು.

ಪ್ರಸ್ತುತ ದೇಶದಲ್ಲಿ ಪರಮಾಣು ಶಕ್ತಿ ಉತ್ಪಾದನೆಯನ್ನು ಹೆಚ್ಚಾಗಿ ಸರಕಾರಿ ಘಟಕಗಳು- ನಿರ್ವಹಿಸುತ್ತಿವೆ. ಭಾರತವು 2070ರ ವೇಳೆಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. 2024 ನ.30ಕ್ಕೆ ಇದ್ದಂತೆ ದೇಶವು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ 2,13,701 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು, ಇದು ಒಟ್ಟು ಸಾಮರ್ಥ್ಯದ ಶೇ.46.8ರಷ್ಟಿದೆ.

ಭಾರತವು ಪರಮಾಣು, ಜಲ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಲ್ಲಿ ಗಮನಾರ್ಹ ಪ್ರಗತಿಯೊಂದಿಗೆ 2030ರ ವೇಳೆಗೆ ಶೇ.50ರಷ್ಟು ಪಳೆಯುಳಿಕೆಯೇತರ ಇಂಧನ ಉತ್ಪಾದನೆ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ವಿದ್ಯುಚ್ಛಕ್ತಿ ವಿತರಣೆ ಸುಧಾರಣೆಗಳನ್ನು ಉತ್ತೇಜಿಸಲು ಮತ್ತು ರಾಜ್ಯದೊಳಗೆ ಪ್ರಸರಣ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜನೆಗಳನ್ನೂ ವಿತ್ತಸಚಿವೆ ಪ್ರಕಟಿಸಿದರು. ಇದು ವಿದ್ಯುತ್ ಕಂಪನಿಗಳ ಆರ್ಥಿಕ ಆರೋಗ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಈ ಸುಧಾರಣಾ ಕ್ರಮಗಳ ಅನುಷ್ಠಾನಕ್ಕಾಗಿ ರಾಜ್ಯಗಳಿಗೆ ತಮ್ಮ ಜಿಡಿಪಿಯ ಶೇ.0.5ರಷ್ಟು ಹೆಚ್ಚುವರಿ ಸಾಲಗಳನ್ನು ಅನುಮತಿಸಲಾಗುವುದು ಎಂದು ಅವರು ದೃಢಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News