ಸ್ವದೇಶಿ ನಿರ್ಮಿತ ಉತ್ಪನ್ನಗಳನ್ನೇ ಖರೀದಿಸಿ: ಜನತೆಗೆ ಪ್ರಧಾನಿ ಮೋದಿ ಮನವಿ
ನರೇಂದ್ರ ಮೋದಿ | PTI
ದಾಹೋಡ್: ಭಾರತದಲ್ಲಿ ಉತ್ಪಾದನೆಯಾದ ಉತ್ಪನ್ನಗಳನ್ನೇ ಬಳಸುವುದನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಪ್ರಾರಂಭಿಸಬೇಕು ಎಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ ನೀಡಿದ್ದಾರೆ.
ದಾಹೋಡ್‌ನಲ್ಲಿ ಆಯೋಜನೆಗೊಂಡಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗಣೇಶ ಚತುರ್ಥಿಯ ಸಂದರ್ಭದಲ್ಲೂ ಕೂಡಾ ಸಣ್ಣ ಕಣ್ಣುಗಳಿರುವ ಗಣೇಶನ ಮೂರ್ತಿಯನ್ನು ನಮ್ಮ ದೇಶದಲ್ಲೇ ಖರೀದಿಸುವ ಬದಲು ವಿದೇಶಗಳಲ್ಲಿ ತಯಾರಿಸಿದ ಅಂತಹ ಮೂರ್ತಿಯನ್ನು ಖರೀದಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
21,000 ಕೋಟಿ ರೂ. ಮೊತ್ತದ ಹೂಡಿಕೆಯೊಂದಿಗೆ ನಿರ್ಮಿಸಲಾಗಿರುವ ರೈಲ್ವೆಯ ವಿದ್ಯುತ್‌ಚಾಲಿತ ಲೋಕೊಮೋಟಿವ್ ಇಂಜಿನ್ ಉತ್ಪಾದನಾ ಘಟಕದ ಉದ್ಘಾಟನೆಯೊಂದಿಗೆ, ಸುಮಾರು 24,000 ಕೋಟಿ ರೂ. ಮೌಲ್ಯದ ಸರಣಿ ಯೋಜನೆಗಳ ಉದ್ಘಾಟನೆಗಾಗಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ದಾಹೋಡ್‌ಗೆ ಆಗಮಿಸಿದ್ದರು. ವಡೋದರದಲ್ಲಿ ಆಯೋಜನೆಗೊಂಡಿದ್ದ ರೋಡ್ ಶೋನಲ್ಲಿ ಪಾಲ್ಗೊಂಡ ನಂತರ, ಅವರು ದಾಹೋಡ್‌ಗೆ ಆಗಮಿಸಿದ್ದರು. ಈ ವೇಳೆ, ವಲ್ಸದ್-ದಾಹೋಡ್ ನಡುವಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೂ ಹಸಿರು ನಿಶಾನೆ ತೋರಿಸಲಾಯಿತು. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ, ಪ್ರಧಾನಿ ನರೇಂದ್ರ ಮೋದಿ ತಮ್ಮ ತವರು ರಾಜ್ಯ ಗುಜರಾತ್‌ಗೆ ನೀಡಿದ ಪ್ರಥಮ ಭೇಟಿ ಇದಾಗಿದೆ.
ನಮ್ಮ ದೇಶವು ತನ್ನ ಸ್ವಂತ ಬಳಕೆಗಾಗಿ ಮಾತ್ರ ಉತ್ಪಾದಿಸುತ್ತಿಲ್ಲ; ಬದಲಿಗೆ, ರಫ್ತಿಗಾಗೂ ಉತ್ಪಾದನೆ ಮಾಡುತ್ತಿದೆ. ನಮ್ಮ ದೇಶವಿಂದು ಸ್ಮಾರ್ಟ್ ಫೋನ್‌ಗಳು, ಕಾರುಗಳು, ಬೊಂಬೆಗಳು, ಶಸ್ತ್ರಾಸ್ತ್ರಗಳು ಹಾಗೂ ಔಷಧಗಳನ್ನು ರಫ್ತು ಮಾಡುತ್ತಿದೆ ಎಂದು ಅವರು ಶ್ಲಾಘಿಸಿದ್ದಾರೆ.
ಒಂದು ಕಾಲದಲ್ಲಿ ರೈಲ್ವೆಗಾಗಿನ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ನಮ್ಮ ದೇಶವೀಗ, ರೈಲ್ವೆ ಹಾಗೂ ಮೆಟ್ರೊಗಳಿಗೆ ಸಂಬಂಧಿಸಿದ ತಂತ್ರಜ್ಞಾನದ ಅಭಿವೃದ್ದಿ, ಉತ್ಪಾದನೆ ಹಾಗೂ ರಫ್ತಿಗೆ ಕೊಡುಗೆ ನೀಡುತ್ತಿದೆ. ಈ ಅಭಿವೃದ್ಧಿಗಳಿಗೆ ದಾಹೋಡ್ ಒಂದು ಉದಾಹರಣೆ ಎಂದು ಅವರು ಪ್ರತಿಪಾದಿಸಿದ್ದಾರೆ.