ನಂದನ್‌ಕೋಡ್ ಸಾಮೂಹಿಕ ಹತ್ಯೆ ಪ್ರಕರಣ | ಕ್ಯಾಡೆಲ್ ಜೀನ್ಸನ್ ರಾಜಾ ದೋಷಿ ಎಂದು ತೀರ್ಪು ನೀಡಿದ ಕೋರ್ಟ್
Photo | thehindu
ತಿರುವನಂತಪುರಂ: ನಂದನ್‌ಕೋಡ್ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ತಿರುವನಂತಪುರದ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಸೋಮವಾರ ಕ್ಯಾಡೆಲ್ ಜೀನ್ಸನ್ ರಾಜಾನನ್ನು ದೋಷಿ ಎಂದು ತೀರ್ಪು ನೀಡಿದೆ.
ಎಪ್ರಿಲ್ 2017ರಲ್ಲಿ ನಂದನ್‌ಕೋಡ್ ಸಾಮೂಹಿಕ ಹತ್ಯೆ ಪ್ರಕರಣ ಕೇರಳದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ರಾಜಾ ತನ್ನ ತಂದೆ-ತಾಯಿ, ಸಹೋದರಿ ಸೇರಿದಂತೆ ನಾಲ್ವರನ್ನು ಕೊಲೆ ಮಾಡಿದ್ದ. ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಮಂಗಳವಾರ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಕ್ಯಾಡೆಲ್ ಜೀನ್ಸೆನ್ ರಾಜಾ ತನ್ನ ತಂದೆ ಪ್ರೊಫೆಸರ್ ರಾಜಾ ಥಂಕಮ್ (60), ತಾಯಿ ಡಾ. ಜೀನ್ ಪದ್ಮಾ (58) ಸಹೋದರಿ ಕ್ಯಾರೋಲಿನ್ (26) ಮತ್ತು ಚಿಕ್ಕಮ್ಮ ಲಲಿತಾ (70) ಅವರನ್ನು ಕ್ರೂರವಾಗಿ ಕೊಲೆ ಮಾಡಿದ್ದ.
ಅಧಿಕಾರಿಗಳ ಪ್ರಕಾರ, ಕ್ಯಾಡೆಲ್ ಮೂವರನ್ನು ಕೊಲೆ ಮಾಡಿ ಮೃತದೇಹವನ್ನು ಸ್ನಾನಗೃಹದಲ್ಲಿ ಸುಟ್ಟುಹಾಕಿದ್ದ. ಒಂದು ಮೃತದೇಹ ಮನೆಯಲ್ಲಿ ಬೆಡ್ ಶೀಟ್‌ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಲೆ ಬಳಿಕ ಆರೋಪಿ ಚೆನ್ನೈಗೆ ಪರಾರಿಯಾಗಿದ್ದ. ಆದರೆ 2017ರ ಎಪ್ರಿಲ್ 10ರಂದು ಪೊಲೀಸರು ಆತನನ್ನು ಬಂಧಿಸಿದ್ದರು. ಕೌಟುಂಬಿಕ ವಿವಾದದಿಂದ ಕೊಲೆ ಮಾಡಿರುವುದಾಗಿ ವಿಚಾರಣೆಯ ವೇಳೆ ಆತ ಒಪ್ಪಿಕೊಂಡಿದ್ದ.