×
Ad

ಪ್ರಧಾನಿ ಮೋದಿ ಭಾಗವಹಿಸುವುದಾದರೆ ಮಾತ್ರ ಸರ್ವಪಕ್ಷ ಸಭೆ ಕರೆಯಿರಿ: ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್

Update: 2025-05-11 17:09 IST

ಕಪಿಲ್ ಸಿಬಲ್ | PC : PTI

ಹೊಸ ದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿದೆ ಎಂಬ ಘೋಷಣೆಯ ಬೆನ್ನಿಗೇ, ಸರ್ವಪಕ್ಷ ಸಭೆಯನ್ನು ಕರೆಯಬೇಕು ಎಂದು ಆಗ್ರಹಿಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ ಎಂದು ಸರಕಾರ ಭರವಸೆ ನೀಡುವವರೆಗೂ ಯಾವುದೇ ರಾಜಕೀಯ ಪಕ್ಷಗಳು ಆ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳಬಾರದು ಎಂದೂ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಪಿಲ್ ಸಿಬಲ್, “ಪ್ರಧಾನಿಯು ತಾನು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಭರವಸೆ ನೀಡುವವರೆಗೂ ಯಾವ ರಾಜಕೀಯ ಪಕ್ಷಗಳು ಆ ಭಾಗವಹಿಸಬಾರದು ಎಂದು ನಾನು ಮನವಿ ಮಾಡುತ್ತೇನೆ. ಒಂದು ವೇಳೆ ಈಗೇನಾದರೂ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿರುತ್ತಿದ್ದರೆ, ಅವರು ಇಂತಹ ಸಭೆಗೆ ಹಾಜರಾಗಿರುತ್ತಿದ್ದರು ಹಾಗೂ ವಿಶೇಷ ಸಂಸತ್ ಅಧಿವೇಶನ ಕರೆದಿರುತ್ತಿದ್ದರು ಎಂಬ ಬಗ್ಗೆ ನನಗೆ ವಿಶ್ವಾಸವಿದೆ” ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಭಾರತ ಮತ್ತು ಪಾಕಿಸ್ತಾನದ ನಡುವಿನ ಈ ಚಾರಿತ್ರಿಕ ಒಪ್ಪಂದದಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಇತ್ತೀಚಿನ ಪೋಸ್ಟ್ ಹಾಗೂ 48 ಗಂಟೆಗಳಿಂದ ಮಾತುಕತೆ ಪ್ರಗತಿಯಲ್ಲಿದೆ ಹಾಗೂ ತಟಸ್ಥ ಮಾತುಕತೆಯ ಸ್ಥಳದ ಕುರಿತು ಚರ್ಚಿಸಲಾಯಿತು ಎಂದು ಅಮೆರಿಕ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ ನೀಡಿರುವ ಹೇಳಿಕೆಯನ್ನೂ ಅವರು ಈ ವೇಳೆ ಉಲ್ಲೇಖಿಸಿದರು.

“ಯಾಕೆ, ಹೇಗೆ ಮತ್ತು ಯಾವ ಸನ್ನಿವೇಶದಲ್ಲಿ ಈ ಒಪ್ಪಂದಕ್ಕೆ ತಲುಪಲಾಯಿತು ಎಂಬ ಯಾವುದರ ಕುರಿತೂ ನಮಗೆ ವಿವರಣೆ ನೀಡಿಲ್ಲ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಕೂಡಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯ ಬಗ್ಗೆ ಎಂದು ತಿಳಿದುಕೊಳ್ಳಲು ದೇಶದ ಜನರು ಕಾಯುತ್ತಿದ್ದಾರೆ” ಎಂದು ಅವರು ಹೇಳಿದರು.

“ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಕೂಡಾ ಭಾಗವಹಿಸಲಿದ್ದಾರೆ ಎಂದು ಸರಕಾರ ಭರವಸೆ ನೀಡುವವರೆಗೂ ಯಾವ ರಾಜಕೀಯ ಪಕ್ಷಗಳೂ ಆ ಸಭೆಯಲ್ಲಿ ಭಾಗವಹಿಸಬಾರದು ಎಂದು ನಾನು ಮನವಿ ಮಾಡಲು ಬಯಸುತ್ತೇನೆ” ಎಂದೂ ಅವರು ಹೇಳಿದರು.

ಶನಿವಾರ ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿದ್ದು, ಈ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಹಾಗೂ ವಿಶೇಷ ಸಂಸತ್ ಅಧಿವೇಶನ ಕರೆಯಬೇಕು ಎಂದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಕೂಡಾ ಆಗ್ರಹಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News