×
Ad

ಉತ್ತರ ಪ್ರದೇಶ| ಸುಲಿಗೆಯ ಆರೋಪದಲ್ಲಿ ವಿಎಚ್‌ಪಿ ನಾಯಕನ ಬಂಧನ: ಜಿಲ್ಲಾಧಿಕಾರಿ, ಎಸ್‌ಪಿಯನ್ನು ಭೇಟಿಯಾದ ನಂತರ ಗಂಭೀರ ಸೆಕ್ಷನ್‌ಗಳನ್ನು ಕೈಬಿಟ್ಟ ಪೊಲೀಸರು!

Update: 2025-11-12 15:13 IST

ಸಾಂದರ್ಭಿಕ ಚಿತ್ರ 

ಪಿಲಿಭಿತ್ (ಉತ್ತರ ಪ್ರದೇಶ): ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರನ್ನು ಭೇಟಿಯಾದ ಕೆಲವೇ ದಿನಗಳಲ್ಲಿ ವಿಶ್ವ ಹಿಂದು ಪರಿಷತ್ (ವಿಎಚ್‌ಪಿ) ನಾಯಕ ಪ್ರಿನ್ಸ್ ಗೌರ್ ವಿರುದ್ಧ ದಾಖಲಿಸಲಾಗಿದ್ದ ಗಂಭೀರ ಕ್ರಿಮಿನಲ್ ಪ್ರಕರಣದ ಸೆಕ್ಷನ್‌ಗಳನ್ನು ಪೊಲೀಸರು ಕೈಬಿಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ ಎಂದು Times of India ವರದಿ ಮಾಡಿದೆ.

ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆರೋಪದಲ್ಲಿ ಪಿಲಿಭಿತ್‌ ನ ಹೆಚ್ಚುವರಿ ಜಿಲ್ಲಾಧಿಕಾರಿ ರಿತು ಪುನಿಯಾ ಅವರು ನ. 6 ರಂದು ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ, ಪ್ರಿನ್ಸ್ ಗೌರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಗೌರ್ ನನ್ನು ನ.8 ರಂದು ನಕಲಿ ದಾಖಲೆ ಸೃಷ್ಟಿ, ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಬಂಧಿಸಲಾಗಿತ್ತು.

ಆರಂಭಿಕ ಎಫ್‌ಐಆರ್‌ನಲ್ಲಿ ಬಿಎನ್‌ಎಸ್ ಸೆಕ್ಷನ್‌ ಗಳು 132(2), 336(3), 338, 340(2), 308(5) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇವುಗಳಲ್ಲಿ ಬಿಎನ್‌ಎಸ್ 338 ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 308(5) ಅಡಿಯಲ್ಲಿ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ನಿಬಂಧನೆಗಳಿದ್ದವು.

ಆದರೆ ನ. 11 ರಂದು ಪೊಲೀಸರು 308(5) ಸೆಕ್ಷನ್‌ನ್ನು ಕೇವಲ ಏಳು ವರ್ಷಗಳ ಶಿಕ್ಷೆ ವಿಧಿಸುವ 308(4) ಸೆಕ್ಷನ್‌ನೊಂದಿಗೆ ಬದಲಾಯಿಸಿದ್ದು, ಜೊತೆಗೆ 338, 336(3) ಮತ್ತು 340(2) ಸೆಕ್ಷನ್‌ಗಳನ್ನು ಎಫ್‌ಐಆರ್‌ನಿಂದ ಕೈಬಿಟ್ಟಿದ್ದಾರೆ.

“ತನಿಖಾ ಅಧಿಕಾರಿ ಸತೀಶ್ ಕುಮಾರ್ ಅವರು ಸಿಜೆಎಂ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಕೆಲವು ಸೆಕ್ಷನ್‌ಗಳನ್ನು ತೆಗೆದುಹಾಕಲಾಗಿದೆ ಎಂದು ದೃಢಪಡಿಸಿದ್ದಾರೆ”, ಎಂದು ಪ್ರಿನ್ಸ್ ಗೌರ್ ಪರ ವಕೀಲ ಅಶ್ವನಿ ಅಗ್ನಿಹೋತ್ರಿ ಅವರು Times of India ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಎಚ್‌ಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಈ ಕುರಿತು ಜಿಲ್ಲಾಧಿಕಾರಿ ಜ್ಞಾನೇಂದ್ರ ಸಿಂಗ್ ಮತ್ತು ಎಸ್‌ಪಿ ವಿಕ್ರಮ್ ದಹಿಯಾ ಅವರನ್ನು ಭೇಟಿ ಮಾಡಿ “ಪ್ರಕರಣದ ರಾಜಕೀಯ ದುರುಪಯೋಗಕ್ಕೆ ವಿರೋಧವಾಗಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

“ವಸತಿ ನಿಲಯ ಅಭಿವೃದ್ಧಿ ಪ್ರಕರಣದಲ್ಲಿ ಗೌರ್ ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಎಳೆದು ಕಿರುಕುಳ ನೀಡಿದ್ದು, ಸುಲಿಗೆ ಹಣಕ್ಕೂ ಬೇಡಿಕೆ ಇಟ್ಟಿದ್ದಾರೆ” ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಿತು ಪುನಿಯಾ ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಪಿಲಿಭಿತ್ ಜಿಲ್ಲಾಧಿಕಾರಿ ಜ್ಞಾನೇಂದ್ರ ಸಿಂಗ್, “ವಿಎಚ್‌ಪಿ ನಾಯಕರಿಗೆ ತಮ್ಮ ಆಕ್ಷೇಪಣೆಗಳನ್ನು ಲಿಖಿತವಾಗಿ ನೀಡುವಂತೆ ಸೂಚಿಸಲಾಗಿದೆ. ತನಿಖೆ ಸಂಪೂರ್ಣ ಪಾರದರ್ಶಕ ಹಾಗೂ ಕಾನೂನಿನ ಪ್ರಕಾರ ನಡೆಯಲಿದೆ", ಎಂದರು.

“ಹಿರಿಯ ಆಡಳಿತಾಧಿಕಾರಿಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ಮುಂದುವರಿಯುತ್ತಿದೆ", ಎಂದು ಎಎಸ್‌ಪಿ ವಿಕ್ರಮ್ ದಹಿಯಾ ಹೇಳಿದ್ದಾರೆ.

ಇನ್ನೊಂದೆಡೆ, ವಿಎಚ್‌ಪಿ ರಾಜ್ಯ ಕಾರ್ಯಕಾರಿಣಿ ರಾಜೇಶ್ ಅವರು ಪೊಲೀಸರ ಕ್ರಮವನ್ನು ಟೀಕಿಸಿದ್ದಾರೆ. “ಹೆಚ್ಚುವರಿ ಜಿಲ್ಲಾಧಿಕಾರಿ ಅವರ ತಪ್ಪುಗಳನ್ನು ಮರೆಮಾಚಲು ಪ್ರಕರಣವನ್ನು ದುರ್ಬಲಗೊಳಿಸಲಾಗಿದೆ. ಗೌರ್ ಅವರ ದೂರಿಗೂ ತನಿಖೆ ನಡೆಯಬೇಕು, ಸತ್ಯ ಹೊರಬರಬೇಕು” ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News