×
Ad

ಮೋದಿ, ಆರೆಸ್ಸೆಸ್ ಕುರಿತು ಆಕ್ಷೇಪಾರ್ಹ ಪೋಸ್ಟ್‌ಗಳ ಪ್ರಕರಣ | ವ್ಯಂಗ್ಯ ಚಿತ್ರಕಾರ ಹೇಮಂತ ಮಾಳವೀಯಗೆ ನಿರೀಕ್ಷಣಾ ಜಾಮೀನು

Update: 2025-09-02 20:26 IST

ನರೇಂದ್ರ ಮೋದಿ(PTI) , ಹೇಮಂತ ಮಾಳವೀಯ(X/@HemantMalviya73)

ಹೊಸದಿಲ್ಲಿ,ಸೆ.2: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಆಕ್ಷೇಪಾರ್ಹ ಕಾರ್ಟೂನುಗಳನ್ನು ಹಂಚಿಕೊಂಡಿದ್ದ ಆರೋಪವನ್ನು ಎದುರಿಸುತ್ತಿರುವ ವ್ಯಂಗ್ಯ ಚಿತ್ರಕಾರ ಹೇಮಂತ ಮಾಳವೀಯ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.    

ಜೊತೆಗೆ ಅವರಿಗೆ ಬಂಧನದ ವಿರುದ್ಧ ಸಂಪೂರ್ಣ ರಕ್ಷಣೆಯನ್ನು ನೀಡಿದೆ. ಈ ಹಿಂದೆ ಜು.15ರಂದು ನ್ಯಾಯಾಲಯವು ಮಧ್ಯಂತರ ರಕ್ಷಣೆಯನ್ನು ನೀಡಿತ್ತು.

ಮಾಳವೀಯ ಅವರು ಈಗಾಗಲೇ ತನ್ನ ಫೇಸ್‌ ಬುಕ್ ಮತ್ತು ಇನ್‌ ಸ್ಟಾಗ್ರಾಂ ಖಾತೆಗಳಲ್ಲಿ ಕ್ಷಮೆ ಯಾಚಿಸಿರುವುದನ್ನು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠವು ಗಮನಕ್ಕೆ ತೆಗೆದುಕೊಂಡಿತು. ಆದಾಗ್ಯೂ ಮಾಳವೀಯ ತನಿಖೆಗೆ ಸಹಕರಿಸದಿದ್ದರೆ ಅವರ ಜಾಮೀನು ರದ್ದತಿಯನ್ನು ಕೋರಲು ಪೋಲಿಸರಿಗೆ ಅವಕಾಶ ನೀಡಿತು.

ಮಾಳವೀಯ ಪರ ಹಿರಿಯ ನ್ಯಾಯವಾದಿ ವೃಂದಾ ಗ್ರೋವರ್ ಅವರು ಪೋಲಿಸರು ತನ್ನ ಕಕ್ಷಿದಾರರಿಗೆ ಇನ್ನೂ ಸಮನ್ಸ್ ಹೊರಡಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರು, ಸಾಕ್ಷ್ಯ ಸಂಗ್ರಹ ಪೂರ್ಣಗೊಂಡ ಬಳಿಕ ಸಮನ್ಸ್ ನೀಡಲಾಗುವುದು ಎಂದು ಹೇಳಿದರು.

ಮೇ ತಿಂಗಳಿನಲ್ಲಿ ಆರೆಸ್ಸೆಸ್ ಕಾಯಕರ್ತ ಹಾಗೂ ವಕೀಲ ವಿನಯ್ ಜೋಶಿಯವರ ದೂರಿನ ಆಧಾರದಲ್ಲಿ ಮಧ್ಯಪ್ರದೇಶದ ಇಂದೋರ್ ಪೋಲಿಸರು ಮಾಳವೀಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆರೋಪಿಯ ಪೋಸ್ಟ್‌ ಗಳು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿವೆ,ಕೋಮು ಸೌಹಾರ್ದವನ್ನು ಕದಡಿವೆ ಮತ್ತು ಆರೆಸ್ಸೆಸ್‌ ನ ವರ್ಚಸ್ಸಿಗೆ ಕಳಂಕವನ್ನುಂಟು ಮಾಡಿವೆ ಎಂದು ದೂರುದಾರರು ಆಪಾದಿಸಿದ್ದರು.

ಜು.3ರಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ನಿರೀಕ್ಷಣಾ ಜಾಮೀನಿಗಾಗಿ ತನ್ನ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಮಾಳವೀಯ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ಮಾಳವೀಯ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದ ತನ್ನ ಜು.15ರ ಆದೇಶದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಆಕ್ಷೇಪಾರ್ಹ ಪೋಸ್ಟ್‌ ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯವು ಈ ಪ್ರವೃತ್ತಿಯನ್ನು ನಿಯಂತ್ರಿಸಲು ನ್ಯಾಯಾಂಗ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿತ್ತು.

ಮಾಳವೀಯ ಬಿಎನ್‌ಎಸ್ ಮತ್ತು ಐಟಿ ಕಾಯ್ದೆಯಡಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News