ಪುತ್ರನ ನಿಗೂಢ ಸಾವು ಪ್ರಕರಣ | ಮಾಜಿ ಡಿಜಿಪಿ ಮುಹಮ್ಮದ್ ಮುಸ್ತಫಾ, ಪತ್ನಿ ಮಾಜಿ ಸಚಿವೆ ರಝಿಯಾ ಸುಲ್ತಾನಾ ವಿರುದ್ಧ ಸಿಬಿಐ ಎಫ್‌ಐಆರ್
ಮುಹಮ್ಮದ್ ಮುಸ್ತಫಾ (Photo: ITG)
ಹೊಸದಿಲ್ಲಿ: ಹರ್ಯಾಣದ ಪಂಚಕುಲದಲ್ಲಿ ಅ. 16ರಂದು ಅನುಮಾನಾಸ್ಪದವಾಗಿ ಮೃತಪಟ್ಟ ಪಂಜಾಬ್‌ನ ಮಾಜಿ ಡಿಜಿಪಿ ಮುಹಮ್ಮದ್ ಮುಸ್ತಫಾ ಅವರ ಪುತ್ರ ಅಖಿಲ್ ಅಖ್ತರ್ (35) ಸಾವಿನ ಪ್ರಕರಣ ಹೊಸ ತಿರುವು ಪಡೆದಿದೆ. ಈ ಪ್ರಕರಣದಲ್ಲಿ ಮುಸ್ತಫಾ ಹಾಗೂ ಅವರ ಪತ್ನಿ ಮತ್ತು ಪಂಜಾಬ್ ನ ಪಿಡಬ್ಲ್ಯೂಡಿಯ ಮಾಜಿ ಸಚಿವೆ ರಝಿಯಾ ಸುಲ್ತಾನಾ ವಿರುದ್ಧ ಸಿಬಿಐ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದಡಿ ಎಫ್‌ಐಆರ್ ದಾಖಲಿಸಿದೆ.
“ಪಂಚಕುಲದ ಮಾನ್ಸಾ ದೇವಿ ಮಂದಿರ ಬಳಿಯ ಸೆಕ್ಟರ್–4ರಲ್ಲಿ ವಾಸಿಸುತ್ತಿದ್ದ ಮುಸ್ತಫಾ ದಂಪತಿಯ ಪುತ್ರ ಅಖಿಲ್ ಅಖ್ತರ್ ಅಕ್ಟೋಬರ್ 16ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದಲ್ಲಿ ಸಿಬಿಐ ನವೆಂಬರ್ 6ರಂದು ಎಫ್‌ಐಆರ್ ದಾಖಲಿಸಿದೆ” ಎಂದು ಸಿಬಿಐ ವಕ್ತಾರರು ತಡರಾತ್ರಿ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಸಿಬಿಐ ದಾಖಲಿಸಿದ ಎಫ್‌ಐಆರ್ ಪ್ರಕಾರ, ಅಖ್ತರ್ ಹಾಗೂ ಅವರ ಕುಟುಂಬದ ಸದಸ್ಯರ ನಡುವೆ ಕೆಲವು ದಿನಗಳಿಂದ ಅಸಮಾಧಾನ ಮುಂದುವರಿದಿತ್ತು ಎಂದು ತಿಳಿದು ಬಂದಿದೆ.
ಅಖಿಲ್ ಅಖ್ತರ್ ಅವರ ಪತ್ನಿ ಮತ್ತು ಸಹೋದರಿಯನ್ನೂ ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 120ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಯ ಕೆಲ ವಾರಗಳ ಮುನ್ನ, ಆಗಸ್ಟ್ 27ರಂದು ಅಖಿಲ್ ಅಖ್ತರ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದರು. ಅದರಲ್ಲಿ ತಮ್ಮ ಪತ್ನಿ ಮತ್ತು ತಂದೆಯ ನಡುವೆ “ಅಕ್ರಮ ಸಂಬಂಧ” ಇರುವುದನ್ನು ಆರೋಪಿಸಿ, ತಾಯಿ, ಸಹೋದರಿ ಮತ್ತು ಕುಟುಂಬ ಸದಸ್ಯರು ತಮ್ಮನ್ನು ಕೊಲ್ಲಲು ಅಥವಾ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಆರಂಭದಲ್ಲಿ ಈ ಪ್ರಕರಣವನ್ನು ಪಂಚಕುಲ ಪೊಲೀಸರು ದಾಖಲಿಸಿದ್ದರು. ಬಳಿಕ ಹರ್ಯಾಣ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು.