ಇಂಟರ್ ಪೋಲ್ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಯ ಅವಧಿ 14 ತಿಂಗಳಿನಿಂದ ಮೂರು ತಿಂಗಳಿಗೆ ಇಳಿಕೆ: ಸಿಬಿಐ ನಿರ್ದೇಶಕ ಪ್ರವೀಣ್ ಸೂದ್
ಪ್ರವೀಣ್ ಸೂದ್ | Photo Credit : PTI
ಹೊಸದಿಲ್ಲಿ: ದೇಶ ಭ್ರಷ್ಟರನ್ನು ಬಂಧಿಸಲು ರೆಡ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್ ಗೆ ದೇಶದ ಕಾನೂನು ಜಾರಿ ಪ್ರಾಧಿಕಾರಗಳು ಸಲ್ಲಿಸುವ ಮನವಿಯನ್ನು ವಿಲೇವಾರಿ ಮಾಡುವ ಅವಧಿಯನ್ನು ಗಮನಾರ್ಹವಾಗಿ ಇಳಿಕೆ ಮಾಡಲಾಗಿದ್ದು, ಸರಾಸರಿ 14 ತಿಂಗಳಿನಿಂದ ಮೂರು ತಿಂಗಳಿಗೆ ಇಳಿಕೆ ಮಾಡಲಾಗಿದೆ ಎಂದು ಗುರುವಾರ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ, ಸಿಬಿಐ ಆಯೋಜಿಸಿದ್ದ “ದೇಶಭ್ರಷ್ಟರ ಗಡೀಪಾರು: ಸವಾಲುಗಳು ಮತ್ತು ವ್ಯೂಹ ತಂತ್ರಗಳು” ಎಂಬ ವಿಚಾರ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರವೀಣ್ ಸೂದ್, ಸದ್ಯ ಕಾನೂನು ಜಾರಿ ಪ್ರಾಧಿಕಾರಗಳ ಎದುರು ಇಂಟರ್ ಪೋಲ್ ನೋಟಿಸ್ ಜಾರಿಗೊಳಿಸಲು ಎಂಟು ಪ್ರಸ್ತಾವನೆಗಳು ಮಾತ್ರವಿದ್ದು, ಈ ಪೈಕಿ ಒಂದು ತಿಂಗಳ ಹಿಂದಿನ ಪ್ರಸ್ತಾವನೆ ಅತ್ಯಂತ ಹಳೆಯದಾಗಿದೆ ಎಂದು ಹೇಳಿದರು.
96 ಇಂಟರ್ ಪೋಲ್ ನೋಟಿಸ್ ಜಾರಿಯಾಗಿದ್ದ 2024ಕ್ಕೆ ಹೋಲಿಸಿದರೆ, 2025ರ ಮೊದಲ ಒಂಭತ್ತು ತಿಂಗಳಲ್ಲಿ 189 ಇಂಟರ್ ಪೋಲ್ ನೋಟಿಸ್ ಗಳನ್ನು ಜಾರಿಗೊಳಿಸಲಾಗಿದೆ. ಈ ಪೈಕಿ, 79 ರೆಡ್ ಕಾರ್ನರ್ ನೋಟಿಸ್ ಗಳಾದರೆ, 110 ಬ್ಲೂ ಕಾರ್ನರ್ ನೋಟಿಸ್ ಗಳಾಗಿವೆ ಎಂದು ಅವರು ತಿಳಿಸಿದರು.
“ಇಲ್ಲಿಯವರೆಗೆ ದೇಶಭ್ರಷ್ಟರ ವಿರುದ್ಧ ಇಂಟರ್ ಪೋಲ್ ಒಟ್ಟು 957 ನೋಟಿಸ್ ಗಳನ್ನು ಜಾರಿಗೊಳಿಸಿದೆ. ಈ ಪೈಕಿ 231 ನೋಟಿಸ್ ಗಳು ಸಿಬಿಐ ಪ್ರಕರಣಗಳಿಗೆ ಸಂಬಂಧಿಸಿದ್ದರೆ, 130 ನೋಟಿಸ್ ಗಳು ರಾಷ್ಟ್ರೀಯ ತನಿಖಾ ದಳ, 21 ನೋಟಿಸ್ ಗಳು ಜಾರಿ ನಿರ್ದೇಶನಾಲಯ, 12 ನೋಟಿಸ್ ಗಳು ಮಾದಕ ದ್ರವ್ಯ ನಿಯಂತ್ರಣ ದಳಕ್ಕೆ ಸಂಬಂಧಿಸಿದ್ದಾಗಿವೆ. ಇನ್ನುಳಿದ ನೋಟಿಸ್ ಗಳು ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಾಗಿವೆ” ಎಂದು ಅವರು ಮಾಹಿತಿ ನೀಡಿದರು.
189 ರೆಡ್ ಕಾರ್ನರ್ ನೋಟಿಸ್ ಗಳು ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ್ದರೆ, 254 ರೆಡ್ ಕಾರ್ನರ್ ನೋಟಿಸ್ ಗಳು ಭಯೋತ್ಪಾದನೆ ಪ್ರಕರಣಗಳು, 21 ರೆಡ್ ಕಾರ್ನರ್ ನೋಟಿಸ್ ಗಳು ಅಕ್ರಮ ಹಣ ವರ್ಗಾವಣೆ, 55 ರೆಡ್ ಕಾರ್ನರ್ ನೋಟಿಸ್ ಗಳು ಮಾದಕ ದ್ರವ್ಯಗಳು ಹಾಗೂ ಇನ್ನುಳಿದ ರೆಡ್ ಕಾರ್ನರ್ ನೋಟಿಸ್ ಗಳು ಅತ್ಯಾಚಾರ, ಹತ್ಯೆ, ಅಪಹರಣ ಇತ್ಯಾದಿ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿವೆ ಎಂದು ಅವರು ತಿಳಿಸಿದರು.
“ಭಾರತ್ ಪೋಲ್ ಅನ್ನು ಸ್ಥಾಪಿಸಿರುವುದರಿಂದ, ಇಂಟರ್ ಪೋಲ್ ಪ್ರಕಟನೆಗಾಗಿ ರವಾನಿಸಲಾಗುವ ಪ್ರಸ್ತಾವನೆಗಳ ಅವಧಿ ಗಮನಾರ್ಹವಾಗಿ ಇಳಿಕೆಯಾಗಿದ್ದು, ಸರಾಸರಿ 14 ತಿಂಗಳಿನಿಂದ ಅಂದಾಜು ಮೂರು ತಿಂಗಳಿಗೆ ಇಳಿಕೆಯಾಗಿದೆ. ಸದ್ಯ ಸಿಬಿಐ ಬಳಿ ವಿಲೇವಾರಿ ಮಾಡಬೇಕಾದ ಎಂಟು ಪ್ರಸ್ತಾವನೆಗಳು ಮಾತ್ರವಿದ್ದು, ಕೇವಲ ಒಂದು ತಿಂಗಳ ಹಿಂದಿನ ಪ್ರಸ್ತಾವನೆ ಮಾತ್ರ ಅತ್ಯಂತ ಹಳೆಯದ್ದಾಗಿದೆ” ಎಂದು ಅವರು ಹೇಳಿದರು.
“ಈ ಅಂಕಿ-ಸಂಖ್ಯೆಗಳನ್ನು ನೋಡಿದ ಕೂಡಲೇ ಎರಡು ಕಾರಣಗಳಿಗಾಗಿ ಯಾರೂ ಹೆಮ್ಮೆ ಪಡಬಾರದು. ಮೊದಲನೆಯದು, ಇತರ ದೇಶಗಳಿಗೆ ಹೋಲಿಸಿದರೆ, ಈ ಸಂಖ್ಯೆ ಈಗಲೂ ತೀರಾ ಕಡಿಮೆಯಿದೆ. ಎರಡನೆಯದಾಗಿ, ಇಂಟರ್ ಪೋಲ್ ನೋಟಿಸ್ ಗಳು ಪ್ರಕಟವಾದ ನಂತರವಷ್ಟೇ ಅಸಲಿ ಕೆಲಸ ಪ್ರಾರಂಭವಾಗುತ್ತದೆ” ಎಂದು ಅವರು ಸೂಚ್ಯವಾಗಿ ಹೇಳಿದರು.
“ಮುಂದಿನ ಪ್ರಮುಖ ಸವಾಲೆಂದರೆ, ಬೇಕಾಗಿರುವ ದೇಶಭ್ರಷ್ಟರನ್ನು ಪತ್ತೆ ಹಚ್ಚಿ, ಅವರನ್ನು ನ್ಯಾಯಾಂಗ ವಿಚಾರಣೆಗೊಳಪಡಿಸಲು ಅಕ್ಷರಶಃ ದೇಶಕ್ಕೆ ವಾಪಸು ಕರೆ ತರುವುದು” ಎಂದೂ ಅವರು ತಿಳಿಸಿದರು.
ಅಗತ್ಯ ಕೌಶಲ, ವ್ಯೂಹತಂತ್ರ ಹಾಗೂ ಸಹಭಾಗಿತ್ವ ಪ್ರಯತ್ನಗಳನ್ನು ನಡೆಸುವ ಮೂಲಕ, ಎಷ್ಟು ಸಾಧ್ಯವೊ ಅಷ್ಟು ದೇಶಭ್ರಷ್ಟರನ್ನು ಪತ್ತೆ ಹಚ್ಚಿ, ಅವರನ್ನು ಗಡೀಪಾರು ಮಾಡಿಸುವ ಮುಂದಿನ ಸವಾಲನ್ನು ಕೈಗೆತ್ತಿಕೊಳ್ಳುವುದಕ್ಕಾಗಿ ಈ ವಿಚಾರ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.