×
Ad

228 ಕೋಟಿ ರೂ. ವಂಚನೆ ಪ್ರಕರಣ; ಅನಿಲ್ ಅಂಬಾನಿ ಪುತ್ರನ ವಿರುದ್ಧ CBIಯಿಂದ ಪ್ರಕರಣ ದಾಖಲು

Update: 2025-12-09 22:17 IST

 ಜೈ ಅನ್ಮೋಲ್ ಅಂಬಾನಿ , ಅನಿಲ್ ಅಂಬಾನಿ | Photo Credit : PTI 

ಹೊಸದಿಲ್ಲಿ, ಡಿ. 9: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 228.06 ಕೋಟಿ ರೂ. ನಷ್ಟಕ್ಕೆ ಕಾರಣವಾದ ವಂಚನೆ ಹಾಗೂ ಹಣವನ್ನು ಬೇರೆ ಉದ್ದೇಶಕ್ಕಾಗಿ ಬಳಸಿರುವ ಆರೋಪಗಳ ಹಿನ್ನೆಲೆಯಲ್ಲಿ ಉದ್ಯಮಿ ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್ ಅಂಬಾನಿ ವಿರುದ್ಧ CBI ಕ್ರಿಮಿನಲ್ ಪ್ರಕರಣ ದಾಖಲಿಸಿದೆ.

ಅನಿಲ್ ಅಂಬಾನಿ ಅವರ ರಿಲಯನ್ಸ್ ಸಮೂಹ ಹಣ ವರ್ಗಾವಣೆ ತನಿಖೆೆಯನ್ನು ಎದುರಿಸುತ್ತಿದೆ. ಸುಮಾರು 17,000 ಕೋಟಿ ರೂ. ಸಾಲಗಳಲ್ಲಿ ಅಕ್ರಮಗಳ ಆರೋಪ ಅದರ ಮೇಲಿದೆ.

ಹೊಸದಿಲ್ಲಿಯಲ್ಲಿರುವ CBIಯ ಬ್ಯಾಂಕಿಂಗ್ ಸೆಕ್ಯುರಿಟಿ ಆ್ಯಂಡ್ ಫ್ರಾಡ್ ಬ್ರಾಂಚ್ (ಬಿಎಸ್ಎಫ್ಬಿ) 2025 ಡಿಸೆಂಬರ್ 6ರಂದು ಎಫ್ಐಆರ್ ದಾಖಲಿಸಿದೆ. ಈ FIRನಲ್ಲಿ ರಿಲಾಯನ್ಸ್ ಹೋಮ್ ಫೈನಾನ್ ಲಿಮಿಟೆಡ್ (ಆರ್ಎಚ್ಎಫ್ಎಲ್)ನ ಮಾಜಿ ನಿರ್ದೇಶಕ ಜೈ ಅನ್ಮೋಲ್ ಅಂಬಾನಿ, ಕಂಪೆನಿಯ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ನಿರ್ದೇಶಕ ರವೀಂದ್ರ ಶರದ್ ಸುಧಾಲ್ಕರ್, ಅಪರಿಚಿತ ಸಹಚರರು ಹಾಗೂ ಸರಕಾರಿ ಸಿಬ್ಬಂದಿಯನ್ನು ಉಲ್ಲೇಖಿಸಲಾಗಿದೆ.

2016 ಎಪ್ರಿಲ್ 1ರಿಂದ 2019 ಜೂನ್ 30ರ ವರೆಗಿನ ಅವಧಿಯಲ್ಲಿ ವಂಚನೆ ಹಾಗೂ ಹಣ ಬೇರೆ ಉದ್ದೇಶಕ್ಕೆ ಬಳಸಿರುವುದು ನಡೆದಿದೆ ಎಂದು ಆರೋಪಿಸಲಾಗಿದೆ.

ಮುಂಬೈಯಲ್ಲಿರುವ ಯೂನಿಯನ್ ಬ್ಯಾಂಕ್ನ ಸ್ಟ್ರೆಸ್ಡ್ ಅಸೆಟ್ ಮ್ಯಾನೇಜ್ಮೆಂಟ್ ಶಾಖೆಯ ಉಪ ಪ್ರಧಾನ ಮ್ಯಾನೇಜರ್ ಅನೂಪ್ ವಿನಾಯಕ ತರಾಲೆ ಅವರು CBIಗೆ ವಿಸ್ತೃತ ದೂರು ಸಲ್ಲಿಸಿದ್ದರು. ಈ ದೂರಿನಲ್ಲಿ ಆರ್ಎಚ್ಎಫ್ಎಲ್ ಈಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡಿರುವ ಆಂಧ್ರಾ ಬ್ಯಾಂಕ್ ಅನ್ನು 2015ರಲ್ಲಿ ಸಂಪರ್ಕಿಸಿತ್ತು ಹಾಗೂ ಹಣಕಾಸು ನೆರವು ಕೋರಿತ್ತು.

2015 ಫೆಬ್ರವರಿ ಹಾಗೂ ಮೇ ನಡುವೆ ಬ್ಯಾಂಕ್ ಫೆಬ್ರವರಿ 21ರಂದು 200 ಕೋಟಿ ರೂ., ಮೇ 29ರಂದು 150 ಕೋಟಿ ರೂ. ಹಾಗೂ 100 ಕೋಟಿ ರೂ.ಗಳ ಪ್ರತ್ಯೇಕ ಅವಧಿ ಸಾಲಗಳನ್ನು ಮಂಜೂರು ಮಾಡಿತ್ತು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News