ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಖುಲಾಸೆಗೆ ಶಿಫಾರಸು ಮಾಡಿದ ಸಿಬಿಐ
ನರೇಂದ್ರ ದಾಭೋಲ್ಕರ್ (Photo credit: thewire.in)
ಪುಣೆ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸಿರುವ ಸಿಬಿಐ ಬುಧವಾರ ತನ್ನ ಅಂತಿಮ ವರದಿ ಸಲ್ಲಿಸಿದೆ. ಪ್ರಕರಣದ ಮೂವರು ಆರೋಪಿಗಳಾದ ಅಮೋಲ್ ಕಾಳೆ, ರಾಕೇಶ್ ಬಂಗೇರ ಮತ್ತು ಅಮಿತ್ ದಿಗ್ವೇಕರ್ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬಹುದಾದ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂಬ ಕಾರಣ ನೀಡಿ ಅವರನ್ನು ಖುಲಾಸೆಗೊಳಿಸಬೇಕೆಂದು ಸಿಬಿಐ ಶಿಫಾರಸು ಮಾಡಿದೆ. ದಾಭೋಲ್ಕರ್ ಅವರನ್ನು ಆಗಸ್ಟ್ 20, 2013ರಲ್ಲಿ ಹತ್ಯೆಗೈಯ್ಯಲಾಗಿತ್ತು.
ಆರೋಪಿಗಳನ್ನು ಸೆಪ್ಟೆಂಬರ್ 2018ರಲ್ಲಿ ಬಂಧಿಸಲಾಗಿದ್ದರೆ ಅದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಅವರಿಗೆ ಪುಣೆ ನ್ಯಾಯಾಲಯ ಡೀಫಾಲ್ಟ್ ಜಾಮೀನು ಮಂಜೂರುಗೊಳಿಸಿತ್ತು.
ಸಿಬಿಐ ಅಂತಿಮ ವರದಿಯನ್ನು ಅದರ ಡಿವೈಎಸ್ಪಿ ವಿಕಾಸ್ ಕುಮಾರ್ ಮೀನಾ ಮತ್ತು ಐಜಿಪಿ ಸದಾನಂದ ದಾಟೆ ಸಹಿ ಹಾಕಿದ್ದಾರೆ. ವರದಿಯನ್ನು ಪರಿಗಣಿಸಿ ಈ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಲು ನ್ಯಾಯಾಲಯದ ಅನುಮತಿ ಕೋರಿದೆ.
ಹೊಸ ಸಾಕ್ಷ್ಯವೇನಾದರೂ ದೊರೆತರೆ ಸಿಇಐ ಮುಂದೆ ಕೋರ್ಟ್ ಅನುಮತಿ ಪಡೆದು ತನಿಖೆ ನಡೆಸುವುದು ಎಂದೂ ಸಂಸ್ಥೆ ಹೇಳಿದೆ.
ತಲೆಮರೆಸಿಕೊಂಡಿರುವ ಆರೋಪಿಗಳಾದ ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಅವರ ವಿಚಾರಣೆಯು ಈ ಪ್ರಕರಣದ ಹಿಂದಿನ ಸಂಚನ್ನು ಅನಾವರಣಗೊಳಿಸಲು ಅಗತ್ಯವಾಗಿದೆ, ಅವರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ವರದಿ ಹೇಳಿದೆ. ಈ ತಲೆಮರೆಸಿಕೊಂಡಿರುವ ಇಬ್ಬರನ್ನೂ ದಾಭೋಲ್ಕರ್ ಅವರನ್ನು ಹತ್ಯೆಗೈದ ಶೂಟರ್‌ಗಳು ಎಂದು ಗುರುತಿಸಲಾಗಿದೆ.
ವಿಶೇಷ ಸಾರ್ವಜನಿಕ ಅಭಿಯೋಜಕರಾದ ಪ್ರಕಾಶ್ ಸೂರ್ಯವಂಶಿ ಕೂಡ ಸಿಬಿಐ ಪರ ಲಿಖಿತ ಹೇಳಿಕೆ ಸಲ್ಲಿಸಿ ಪ್ರಮುಖ ಸಂಚುಕೋರ ಎಂದು ಗುರುತಿಸಲಾದ ವಿರೇಂದ್ರ ಸಿಂಗ್ ತಾವ್ಡೆ ಮತ್ತು ಶೂಟರ್‌ಗಳಾದ ಸಚಿನ್ ಅಂದೂರೆ ಮತ್ತು ಶರದ್ ಕಲಸ್ಕರ್ ಹಾಗೂ ಇತರ ಇಬ್ಬರ ವಿರುದ್ಧ ಕ್ಲೋಶರ್ ಆಫ್ ಎವಿಡೆನ್ಸ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಪ್ರತಿವಾದಿ ವಕೀಲರಿಗೆ ಸಿಬಿಐ ವರದಿ ಕುರಿತ ತಮ್ಮ ಪ್ರತಿಕ್ರಿಯೆಯನ್ನು ಸೆಪ್ಟೆಂಬರ್ 18ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದ್ದು. ಆ ದಿನ ವಿಚಾರಣೆ ಮತ್ತೆ ನಡೆಯಲಿದೆ.
ಅಮೋಲ್ ಕಾಳೆ, ರಾಕೇಶ್ ಬಂಗೇರ ಮತ್ತು ಅಮಿತ್ ದಿಗ್ವೇಕರ್ ಅವರು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳೂ ಆಗಿದ್ದಾರೆ. ಕಾಳೆ ಮತ್ತು ದಿಗ್ವೇಕರ್ ಅವರು ಹಿರಿಯ ಕಮ್ಯುನಿಸ್ಟ್ ನಾಯಕ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ಆರೋಪಿಗಳು.