ಪಿಎಫ್ ಹಣ ಹಿಂಪಡೆಯುವಿಕೆ ಅವಧಿ 12 ತಿಂಗಳಿಗೆ, ಪಿಂಚಣಿ 36 ತಿಂಗಳಿಗೆ ವಿಸ್ತರಿಸಿದ ಕೇಂದ್ರ ಸರಕಾರ
Photo Credit : epfindia.gov.in
ಹೊಸದಿಲ್ಲಿ: ಕೇಂದ್ರ ಸರಕಾರವು ಭವಿಷ್ಯ ನಿಧಿ(ಪಿಎಫ್)ಯ ಅಂತಿಮ ಇತ್ಯರ್ಥದ ಅವಧಿಯನ್ನು ಎರಡು ತಿಂಗಳಿನಿಂದ 12 ತಿಂಗಳುಗಳಿಗೆ ಹೆಚ್ಚಿಸಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ(ಇಪಿಎಫ್‌ಒ) ಸದಸ್ಯರು ಉದ್ಯೋಗವನ್ನು ಕಳೆದುಕೊಂಡ 12 ತಿಂಗಳುಗಳ ಬಳಿಕವಷ್ಟೇ ತಮ್ಮ ಭವಿಷ್ಯ ನಿಧಿ ಖಾತೆಗಳಿಂದ ಪೂರ್ಣ ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಲು ಸಾಧ್ಯ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸೋಮವಾರ ಪ್ರಕಟಿಸಿದೆ.
ಇದೇ ರೀತಿ ಸದಸ್ಯರು 36 ತಿಂಗಳುಗಳ ನಂತರವಷ್ಟೇ ಪಿಂಚಣಿ ಖಾತೆಗಳಿಂದ ಹಣವನ್ನು ಹಿಂಪಡೆಯಬಹುದು. ಪ್ರಸ್ತುತ ಉದ್ಯೋಗವನ್ನು ಕಳೆದುಕೊಂಡ ಎರಡು ತಿಂಗಳುಗಳ ಬಳಿಕ ಅಂತಿಮ ಪಿಂಚಣಿ ಹಿಂಪಡೆಯಲು ಅವಕಾಶವಿದೆ.
ಹಾಲಿ ನಿಯಮಗಳಡಿ ಕನಿಷ್ಠ ಒಂದು ತಿಂಗಳು ನಿರುದ್ಯೋಗಿಯಾಗಿರುವ ಇಪಿಎಫ್‌ಒ ಸದಸ್ಯ ತನ್ನ ಭವಿಷ್ಯ ನಿಧಿ ಮೊತ್ತದ ಶೇ.75ರವರೆಗೆ ಹಿಂಪಡೆಯಲು ಅವಕಾಶವಿದೆ. ಸತತ ಎರಡು ತಿಂಗಳುಗಳ ಕಾಲ ನಿರುದ್ಯೋಗಿಗಳಾಗಿ ಉಳಿದುಕೊಂಡವರು ಪೂರ್ಣ ಮೊತ್ತವನ್ನು ಹಿಂಪಡೆಯಬಹುದು.
ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ನೇತೃತ್ವದ ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಯೋಜನೆಗೆ ತಿದ್ದುಪಡಿಯನ್ನು ತರಲು ಸೋಮವಾರ ನಿರ್ಧರಿಸಿದೆ.
ಸದಸ್ಯರು ತಮ್ಮ ಪಿಎಫ್ ಖಾತೆಗಳಲ್ಲಿ ‘ಎಲ್ಲ ಸಮಯದಲ್ಲಿಯೂ’ ಶೇ.25ರಷ್ಟು ಮೊತ್ತವನ್ನು ಕನಿಷ್ಠ ಬ್ಯಾಲೆನ್ಸ್ ಆಗಿ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ಸಚಿವಾಲಯವು ಸಭೆಯ ಬಳಿಕ ಹೇಳಿಕೆಯಲ್ಲಿ ತಿಳಿಸಿದೆ.
ಇದು ಸದಸ್ಯರು ಇಪಿಎಫ್‌ಒ ನೀಡುವ ಹೆಚ್ಚಿನ ಬಡ್ಡಿಯನ್ನು(ಪ್ರಸ್ತುತ ವಾರ್ಷಿಕ ಶೇ.8.25) ಗಳಿಸುವ ಜೊತೆಗೆ ಹೆಚ್ಚಿನ ಮೊತ್ತದ ನಿವೃತ್ತಿ ನಿಧಿಯನ್ನು ಪಡೆದುಕೊಳ್ಳಲು ಚಕ್ರಬಡ್ಡಿಯ ಲಾಭವನ್ನು ಪಡೆಯುವುದನ್ನು ಸಾಧ್ಯವಾಗಿಸುತ್ತದೆ ಎಂದು ಸಚಿವಾಲಯವು ತಿಳಿಸಿದೆ.
ಹೊಸ ಮಾರ್ಗಸೂಚಿಗಳು ಟೀಕೆಗೆ ಗುರಿಯಾಗಿದ್ದು, ಇತ್ಯರ್ಥಕ್ಕಾಗಿ ಹೆಚ್ಚಿನ ಅವಧಿಯು ಉದ್ಯೋಗವನ್ನು ಕಳೆದುಕೊಂಡವರಿಗೆ ಮತ್ತು ತಮ್ಮ ಹಣದ ತಕ್ಷಣದ ಅಗತ್ಯವುಳ್ಳವರಿಗೆ ತೊಂದರೆಗಳನ್ನುಂಟು ಮಾಡುತ್ತದೆ ಎಂದು ಪ್ರತಿಪಕ್ಷಗಳ ಸದಸ್ಯರು ಮತ್ತು ತಜ್ಞರು ಬೆಟ್ಟು ಮಾಡಿದ್ದಾರೆ.