ಕೇಂದ್ರ ಸರಕಾರ ನನ್ನನ್ನು ಜೈಲಿಗೆ ತಳ್ಳಲು ಸಂಚು ರೂಪಿಸುತ್ತಿದೆ : ಸೋನಂ ವಾಂಗ್ಚುಕ್ ಆರೋಪ
Photo Credit: ANI
ಲೇಹ್,ಸೆ.24: ಲಡಾಖ್‌ನ ಲೇಹ್‌ನಲ್ಲಿ ಬುಧವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ನನ್ನನ್ನು ಕಠೋರವಾದ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ)ಯಡಿ ಬಂಧಿಸಲು ಹಾಗೂ ಎರಡು ವರ್ಷಗಳ ಕಾಲ ಜೈಲಿನಲ್ಲಿರಿಸಲು ಸಿದ್ಧತೆ ನಡೆಲಾಗುತ್ತಿದೆ ಎಂದು ಲಡಾಖ್‌ನ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಆಪಾದಿಸಿದ್ದಾರೆ.
ಲೇಹ್‌ನಲ್ಲಿ ನಡೆದ ಹಿಂಸಾಚಾರದ ಹಿಂದೆ ತನ್ನ ಕೈವಾಡವಿತ್ತೆಂಬ ಕೇಂದ್ರ ಗೃಹ ಸಚಿವಾಲಯದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ಮಾಡುತ್ತಿರುವ ಆರೋಪವು ಮುಖ್ಯ ವಿಷಯಗಳನ್ನು ಗಮನವನ್ನು ಬೇರೆಡೆ ತಿರುಗಿಸುವ ಯತ್ನವಾಗಿದೆ. ಅವರು ಯಾರನ್ನಾದರೂ ಬಲಿಪಶು ಮಾಡಬಹುದು. ಅದರೆ ಅವರು ಬುದ್ಧಿವಂತರಲ್ಲ. ನಮಗೆ ಜಾಣತನಕ್ಕಿಂತ ವಿವೇಕದ ಅಗತ್ಯವಿದೆ. ಯಾಕೆಂದರೆ ಯುವಕರು ಈಗಾಗಲೇ ಎಚ್ಚೆತ್ತುಕೊಂಡಿದ್ದಾರೆ ಎಂದವರು ಹೇಳಿದ್ದಾರೆ.
ತಾನು ಬಂಧನಕ್ಕೊಳಗಾಗಲು ಸಿದ್ಧನಿದ್ದೇನೆ. ಆದರೆ ಸ್ವತಂತ್ರನಾಗಿರುವ ವಾಂಗ್ಚುಕ್‌ಗಿಂತ ಜೈಲಿನಲ್ಲಿರುವ ವಾಂಗ್ಚುಕ್ ಹೆಚ್ಚು ಸಮಸ್ಯೆಯನ್ನುಂಟು ಮಾಡುತ್ತಾನೆ. ಬುಧವಾರದ ಹಿಂಸಾತ್ಮಕ ಘಟನೆಗಳ ಹಿಂದೆ ಕಾಂಗ್ರೆಸ್ ಪಕ್ಷದ ಅಥವಾ ತನ್ನ ಕೈವಾಡವಿದೆಯೆಂದು ಮಾತುಕತೆ ನಡೆಸದೆ ದೋಷಾರೋಪಣೆಯಲ್ಲೇ ನಿರತವಾದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವುದಕ್ಕೆ ಕಾರಣವಾಗುತ್ತದೆ ಎಂದವರು ಎಚ್ಚರಿಕೆ ನೀಡಿದರು.