×
Ad

ಮಾಜಿ ಎನ್‌ಐಎ ಮುಖ್ಯಸ್ಥ ದಿನಕರ್ ಗುಪ್ತಾ ಭದ್ರತೆಯನ್ನು ತಗ್ಗಿಸಿದ ಕೇಂದ್ರ ಸರಕಾರ

Update: 2025-04-18 16:29 IST

ದಿನಕರ್ ಗುಪ್ತಾ | PC : X 

ಹೊಸದಿಲ್ಲಿ,ಎ.18: ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್‌ಎ)ವು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ಮಾಜಿ ಮಹಾ ನಿರ್ದೇಶಕ ದಿನಕರ್ ಗುಪ್ತಾ ಅವರಿಗೆ ನೀಡಿರುವ ಭದ್ರತೆಯನ್ನು ಝಡ್-ಪ್ಲಸ್‌ನಿಂದ ವೈ-ಕೆಟಗರಿಗೆ ತಗ್ಗಿಸಿದೆ. ಸಿಆರ್‌ಪಿಎಫ್ ಈ ಭದ್ರತೆಯನ್ನು ಒದಗಿಸುತ್ತದೆ.

ಗೃಹ ಸಚಿವಾಲಯವು ಖಾಲಿಸ್ತಾನಿ ಪರ ಶಕ್ತಿಗಳ ಸಂಭವನೀಯ ಬೆದರಿಕೆಗಳಿಂದಾಗಿ ಕಳೆದ ವರ್ಷದ ಮೇ 16ರಂದು ಮಾಜಿ ಪಂಜಾಬ್ ಪೋಲಿಸ್ ಮಹಾನಿರ್ದೇಶಕ(ಡಿಜಿಪಿ)ರೂ ಆಗಿರುವ ಗುಪ್ತಾರಿಗೆ ಝಡ್-ಪ್ಲಸ್ ಭದ್ರತೆಯನ್ನು ಒದಗಿಸಿತ್ತು. ಪಂಜಾಬ್ ಮತ್ತು ದಿಲ್ಲಿಯಲ್ಲಿ ಇರುವಾಗ ಗುಪ್ತಾರಿಗೆ ಸರದಿ ಪ್ರಕಾರ ಭದ್ರತೆಯನ್ನು ಒದಗಿಸಲು ಸಿಆರ್‌ಪಿಎಫ್ ವಿಐಪಿ ಭದ್ರತಾ ಘಟಕದ ಸುಮಾರು 40 ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಕೇಂದ್ರ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಇತ್ತೀಚಿಗೆ ಭದ್ರತಾ ಬೆದರಿಕೆಗಳ ಮೌಲ್ಯಮಾಪನ ನಡೆಸಿದ್ದು,ಎನ್‌ಐಎ ಮುಖ್ಯಸ್ಥರಾಗಿ ಹಾಗೂ ಮಾಜಿ ಪಂಜಾಬ್ ಡಿಜಿಪಿಯಾಗಿ ಗುಪ್ತಾರಿಗೆ ಬೆದರಿಕೆಯಿತ್ತು,ಆದರೆ ಅವರು 2024,ಜು.31ರಂದು ಹುದ್ದೆಯಿಂದ ನಿವೃತ್ತರಾಗಿರುವುದರಿಂದ ಈಗ ಅಂತಹ ಬೆದರಿಕೆ ಅವರಿಗೆ ಇಲ್ಲ ಎಂದು ಸಂಬಂಧಿತ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿದ್ದವು ಎಂದು ಬಲ್ಲ ಮೂಲಗಳು ತಿಳಿಸಿವೆ.

ಈಗ ಗುಪ್ತಾರಿಗೆ ವೈ-ಕೆಟಗರಿ ಭದ್ರತೆಯನ್ನು ಒದಗಿಸಲು ನಿರ್ಧರಿಸಲಾಗಿದ್ದು,ಇಬ್ಬರು ಕಮಾಂಡೋಗಳು ಸೇರಿದಂತೆ ಕನಿಷ್ಠ 12 ಸಿಬ್ಬಂದಿಗಳು ಅವರ ರಕ್ಷಣೆಯ ಹೊಣೆಗಾರಿಕೆ ವಹಿಸಿಕೊಳ್ಳಲಿದ್ದಾರೆ.

1987ರ ತಂಡದ ಪಂಜಾಬ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಗುಪ್ತಾ ಸುಮಾರು ಎರಡು ವರ್ಷಗಳ ಕಾಲ ಎನ್‌ಐಎ ಮುಖ್ಯಸ್ಥರಾಗಿದ್ದರು. ಫೆ.2019ರಿಂದ ಅ.2021ರವರೆಗೆ ಪಂಜಾಬ್ ಡಿಜಿಪಿ ಹುದ್ದೆ ಸೇರಿದಂತೆ ಇತರ ಪ್ರಮುಖ ಹುದ್ದೆಗಳಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News