ಗಲ್ಫ್ ರಾಷ್ಟ್ರಗಳ ಪ್ರವಾಸಕ್ಕೆ ಕೇರಳ ಸಿಎಂಗೆ ಅನುಮತಿ ನಿರಾಕರಿಸಿದ ಕೇಂದ್ರ ಸರಕಾರ : ವರದಿ
ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ (Photo: PTI)
ಹೊಸದಿಲ್ಲಿ: ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ಗಲ್ಫ್ ದೇಶಗಳ ಪ್ರವಾಸಕ್ಕೆ ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ ಎಂದು ಅಧಿಕಾರಿಗಳು ತಿಳಿಸಿರುವ ಬಗ್ಗೆ mathrubhumi.com ವರದಿ ಮಾಡಿದೆ.
ಈ ನಿರ್ಧಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ರಾಜ್ಯ ಸರಕಾರಕ್ಕೆ ತಿಳಿಸಿದೆ. ಅನುಮತಿ ನಿರಾಕರಣೆಗೆ ಯಾವುದೇ ಕಾರಣವನ್ನು ಸರಕಾರ ನೀಡಿಲ್ಲ ಎಂದು ವರದಿಯಾಗಿದೆ.
ಪಿಣರಾಯ್ ವಿಜಯನ್ ಅವರ ಜೊತೆ ಸಚಿವ ಸಾಜಿ ಚೆರಿಯನ್ ಅವರು ಕೂಡ ಗಲ್ಫ್ ರಾಷ್ಟ್ರಗಳ ಪ್ರವಾಸಕ್ಕೆ ತೆರಳಲು ಉದ್ದೇಶಿಸಿದ್ದರು ಎಂದು ತಿಳಿದು ಬಂದಿದೆ.
ಅಕ್ಟೋಬರ್ 16ರಂದು ಕೇರಳ ಸಿಎಂ ಗಲ್ಫ್ ದೇಶಗಳ ಪ್ರವಾಸ ನಿಗದಿಯಾಗಿತ್ತು. ಅದೇ ದಿನ ಸಂಜೆ ಬಹ್ರೇನ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆ ಬಳಿಕ ಬಹ್ರೇನ್‌ನಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಬೇಕಿತ್ತು. ಅಕ್ಟೋಬರ್ 17, 18 ಮತ್ತು 19ರಂದು ಕ್ರಮವಾಗಿ ದಮಾಮ್, ಜಿದ್ದಾ ಮತ್ತು ರಿಯಾದ್ ನಗರಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಅಕ್ಟೋಬರ್ 24 ಮತ್ತು 25ರಂದು ಮಸ್ಕತ್ ಮತ್ತು ಒಮಾನ್‌ನ ಸಲಾಲಾದಲ್ಲಿ ಸಭೆ ಕೂಡ ನಿಗದಿಯಾಗಿತ್ತು ಎಂದು ವರದಿಯಾಗಿದೆ.