×
Ad

ಸ್ಥಳಾಂತರದಿಂದ ಅರಣ್ಯವಾಸಿಗಳನ್ನು ರಕ್ಷಿಸುವಂತೆ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ

Update: 2025-10-28 16:05 IST

ಸಾಂದರ್ಭಿಕ ಚಿತ್ರ | Photo credit  : NDTV 

 

ಹೊಸದಿಲ್ಲಿ: ಕೆಲವು ದಿನಗಳ ಹಿಂದೆ ಅರಣ್ಯ ಹಕ್ಕುಗಳ ಕಾಯ್ದೆ(ಎಫ್‌ಆರ್‌ಎ),2006 ನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿದ್ದ ಕೇಂದ್ರ ಸರಕಾರವು, ಬುಡಕಟ್ಟು ಮತ್ತು ಅರಣ್ಯವಾಸಿ ಸಮುದಾಯಗಳ ಹಕ್ಕುಗಳನ್ನು ಸಂಪೂರ್ಣವಾಗಿ ಗುರುತಿಸಿ ಇತ್ಯರ್ಥಗೊಳಿಸುವವರೆಗೆ ವನ್ಯಜೀವಿ ಅಭಯಾರಣ್ಯಗಳು ಅಥವಾ ರಾಷ್ಟ್ರೀಯ ಉದ್ಯಾನದಿಂದ ಅವರನ್ನು ಬಲವಂತದಿಂತ ತೆರವುಗೊಳಿಸದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಕಾಯ್ದೆಯ ಕಲಂ 42ನ್ನು ಅದು ಉಲ್ಲೇಖಿಸಿ ಅದು ಈ ಸೂಚನೆ ನೀಡಿದೆ ಎಂದು

ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯ್ದೆ,2006ರ(ಸಂಕ್ಷಿಪ್ತವಾಗಿ ಅರಣ್ಯ ಹಕ್ಕುಗಳ ಕಾಯ್ದೆ,2006) ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಭು ನಾಯರ್ ಅವರು ಅ.22ರಂದು ಬರೆದ ಪತ್ರದಲ್ಲಿ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಎಫ್‌ಆರ್‌ಎ ಜಾರಿಗೊಂಡು ಎರಡು ದಶಕಗಳಾಗಿದ್ದರೂ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅದರ ಅನುಷ್ಠಾನವು ನಿಧಾನವಾಗಿದೆ ಎಂದು ಪತ್ರದಲ್ಲಿ ಒತ್ತಿ ಹೇಳಲಾಗಿದೆ.

ಪತ್ರದಲ್ಲಿ ಅರಣ್ಯ ಹಕ್ಕುಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ವೈಯಕ್ತಿಕ ಅರಣ್ಯ,ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗೆ ಆವಾಸ ಸ್ಥಾನ,ಸಮುದಾಯ ಅರಣ್ಯ ಮತ್ತು ಸಮುದಾಯ ಅರಣ್ಯ ಸಂಪನ್ಮೂಲ ಹಕ್ಕುಗಳು ಸೇರಿದಂತೆ 12 ಪ್ರಮುಖ ಆದ್ಯತೆಗಳನ್ನು ಪಟ್ಟಿ ಮಾಡಲಾಗಿದೆ.

ಹಕ್ಕುಗಳ ಇತ್ಯರ್ಥ ಮತ್ತು ಪುನರ್ವಸತಿ ಯೋಜನೆಗಳು ದೃಢವಾಗಿ ಜಾರಿಗೊಳ್ಳುವ ಮುನ್ನ ಯಾವುದೇ ರೀತಿಯ ಬಲವಂತದ ಸ್ಥಳಾಂತರವನ್ನು ಸ್ಪಷ್ಟವಾಗಿ ನಿಷೇಧಿಸುವಂತೆ ಪತ್ರದಲ್ಲಿ ರಾಜ್ಯಗಳಿಗೆ ಆಗ್ರಹಿಸಲಾಗಿದೆ. ಅರ್ಹ ಫಲಾನುಭವಿಗಳು ಸರಕಾರಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವಂತಾಗಲು ಅರಣ್ಯ ಭೂಮಿ ದಾಖಲೆಗಳಲ್ಲಿಯ ವ್ಯತ್ಯಾಸಗಳನ್ನು ಸರಿಪಡಿಸುವಂತೆಯೂ ಕೇಂದ್ರವು ರಾಜ್ಯಗಳಿಗೆ ಸೂಚಿಸಿದೆ.

ಅಧಿಕೃತ ಭೂ ದಾಖಲೆಗಳನ್ನು ನವೀಕರಿಸದಿದ್ದರೆ ಎಫ್‌ಆರ್‌ಎ ಅಡಿ ಗುರುತಿಸಲಾಗಿರುವ ಭೂಮಿಗಳು ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ವಿವಾದದ ವಿಷಯವಾಗಬಹುದು ಎಂದು ಅದು ಎಚ್ಚರಿಕೆ ನೀಡಿದೆ. ಆದಾಗ್ಯೂ,ಇಂತಹ ತಿದ್ದುಪಡಿಗಳು ಆಡಳಿತಾತ್ಮಕ ಸ್ವರೂಪದ್ದಾಗಿವೆ ಮತ್ತು ಅವುಗಳನ್ನು ಯಾವುದೇ ಬಾಕಿಯಿರುವ ಅಥವಾ ಹೊಸ ಹಕ್ಕುಕೋರಿಕೆಯನ್ನು ತಿರಸ್ಕರಿಸಲು ಆಧಾರವನ್ನಾಗಿ ಬಳಸಬಾರದು ಎಂದು ಅದು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News