×
Ad

ಕೇಂದ್ರ ಸರಕಾರ ಕಾಂಗ್ರೆಸ್ ಆಡಳಿತಾರೂಢ ರಾಜ್ಯಗಳನ್ನು ನಿರ್ಲಕ್ಷಿಸುತ್ತಿದೆ: ಪ್ರಿಯಾಂಕಾ ಗಾಂಧಿ ವಾದ್ರಾ

ಹಿಮಾಚಲ ಪ್ರದೇಶಕ್ಕೆ ಸಮರ್ಪಕ ನೆರವು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕಿ

Update: 2025-10-13 19:42 IST

ಪ್ರಿಯಾಂಕಾ ಗಾಂಧಿ | Photo Credit : PTI 

ಶಿಮ್ಲಾ: ಕೇಂದ್ರ ಸರಕಾರ ಕಾಂಗ್ರೆಸ್ ಆಡಳಿತಾರೂಢ ರಾಜ್ಯಗಳನ್ನು ನಿರ್ಲಕ್ಷಿಸುತ್ತಿದ್ದು, ಪ್ರಕೃತಿ ವಿಕೋಪ ಪೀಡಿತ ಹಿಮಾಚಲ ಪ್ರದೇಶಕ್ಕೆ ಸೂಕ್ತ ನೆರವು ಬಿಡುಗಡೆ ಮಾಡಿಲ್ಲ ಎಂದು ಸೋಮವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದರು.

ಶಿಮ್ಲಾದಲ್ಲಿನ ಐತಿಹಾಸಿಕ ರಿಡ್ಜ್ ಮೈದಾನದಲ್ಲಿರುವ ದೌಲತ್ ಸಿಂಗ್ ಉದ್ಯಾನವನದಲ್ಲಿ ಹಿಮಾಚಲ ಪ್ರದೇಶದ ಆರು ಬಾರಿಯ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪ್ರತಿಮೆಯನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅನಾವರಣ ಮಾಡಿದ ನಂತರ ನಡೆದ ರ್ಯಾಲಿಯ ವೇಳೆ ಅವರು ಈ ಆರೋಪ ಮಾಡಿದರು.

ಇದಕ್ಕೂ ಮುನ್ನ, ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ತಮ್ಮ ತಾಯಿ ಸೋನಿಯಾ ಗಾಂಧಿಯೊಂದಿಗೆ ಶಿಮ್ಲಾಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ, ಅವರಿಗೆ ಗೌರವ ನಮನ ಸಲ್ಲಿಸಿದರು.

“ಸುಖ್ವಿಂದರ್ ಸುಖು ಮುಖ್ಯಮಂತ್ರಿಯಾದ ನಂತರ, ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಆದರೆ, ಹಲವು ಮನವಿಗಳನ್ನು ಮಾಡಿದರೂ ಕೇಂದ್ರ ಸರಕಾರ ಕಾಂಗ್ರೆಸ್ ಆಡಳಿತಾರೂಢ ರಾಜ್ಯವಾದ ಹಿಮಾಚಲ ಪ್ರದೇಶಕ್ಕೆ ಸೂಕ್ತ ನೆರವು ಬಿಡುಗಡೆ ಮಾಡಿಲ್ಲ” ಎಂದು ಅವರು ದೂರಿದರು.

ಕೇವಲ ಚುನಾವಣೆಗಳನ್ನು ಗೆಲ್ಲುವುದರಲ್ಲಷ್ಟೇ ಆಸಕ್ತಿಯಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ, ಕಾಂಗ್ರೆಸ್ ಆಡಳಿತಾರೂಢ ಹಿಮಾಚಲ ಪ್ರದೇಶಕ್ಕೆ ತಾರತಮ್ಯವೆಸಗಿದೆ ಎಂದೂ ಅವರು ಆಪಾದಿಸಿದರು.

ಈ ಬಾರಿಯ ಮಾನ್ಸೂರ್ ಋತುವಿನಲ್ಲಿ ಜೂನ್ ನಿಂದ ಸೆಪ್ಟೆಂಬರ್ ತಿಂಗಳವರೆಗೆ 47 ಮೇಘಸ್ಫೋಟಗಳು, 98 ದಿಢೀರ್ ಪ್ರವಾಹಗಳು ಹಾಗೂ 148 ಭಾರಿ ಭೂಕುಸಿತಗಳು ಹಿಮಾಚಲ ಪ್ರದೇಶದಲ್ಲಿ ಸಂಭವಿಸಿವೆ. ಮಳೆ ಸಂಬಂಧಿತ ಘಟನೆಗಳಲ್ಲಿ 270 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಆಗಿರುವ ನಷ್ಟ 5,426 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಕಳೆದ ಎರಡು ವರ್ಷಗಳಲ್ಲೂ ಕೂಡಾ ಪ್ರಕೃತಿ ವಿಕೋಪದಿಂದ ಹಿಮಾಚಲ ಪ್ರದೇಶದಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಹಾನಿಯುಂಟಾಗಿದೆ ಎಂದು ರಾಜ್ಯ ಪ್ರಾಧಿಕಾರಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News