ಕೇಂದ್ರ ಸರಕಾರ ಯಾವುದೇ ರಾಜ್ಯದ ಮೇಲೆ ಯಾವುದೇ ಭಾಷೆಯನ್ನು ಹೇರುವುದಿಲ್ಲ: ಸಚಿವ ಧರ್ಮೇಂದ್ರ ಪ್ರಧಾನ್
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Photo: PTI)
ಹೊಸದಿಲ್ಲಿ : ಕೇಂದ್ರ ಸರಕಾರ ಯಾರ ಮೇಲೆಯೂ ಯಾವುದೇ ಭಾಷೆಯನ್ನು ಹೇರುತ್ತಿಲ್ಲ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆಯನ್ನು ನೀಡಿದ್ದು, ಕೇಂದ್ರವು ರಾಜ್ಯಗಳ ಮೇಲೆ ತ್ರಿಭಾಷಾ ನೀತಿಯನ್ನು ಹೇರುತ್ತಿದೆ ಎಂಬ ಹೇಳಿಕೆಯು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.
'ಥಿಂಕ್ ಇಂಡಿಯಾ ದಕ್ಷಿಣಪಥ ಶೃಂಗಸಭೆ 2025' ರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ನಾವು ಯಾರ ಮೇಲೂ ಯಾವುದೇ ಭಾಷೆಯನ್ನು ಹೇರುತ್ತಿಲ್ಲ. 1 ಮತ್ತು 2 ನೇ ತರಗತಿಗಳಿಗೆ ಎರಡು ಭಾಷಾ ಸೂತ್ರ ಇರುತ್ತದೆ. ಅದರಲ್ಲಿ ಒಂದು ಮಾತೃಭಾಷೆ. ಇಲ್ಲಿ ಅದು ತಮಿಳು ಭಾಷೆ. ಪ್ರಾಥಮಿಕ ಶಾಲೆಯಲ್ಲಿ ನೀವು ತಮಿಳಿನಲ್ಲಿ ಕಲಿಸಬೇಕು ಎಂಬುದು ಭಾರತ ಸರಕಾರದ ಷರತ್ತು. ನಿಮ್ಮ ಆಯ್ಕೆಯ ಇನ್ನೊಂದು ಭಾಷೆಯಲ್ಲಿ ಕೂಡ ನೀವು ಕಲಿಸಬಹುದು ಎಂದು ಹೇಳಿದರು.
ತ್ರಿಭಾಷಾ ನೀತಿಯ ಬಗ್ಗೆ ವಿವರಿಸುತ್ತಾ, ಆರರಿಂದ ಹತ್ತನೇ ತರಗತಿಯವರೆಗೆ ಮೂರು ಭಾಷಾ ಸೂತ್ರವಿದೆ. ಅದರಲ್ಲಿ ಒಂದು ಮಾತೃಭಾಷೆ ಆಗಿರುತ್ತದೆ. ಉಳಿದ ಎರಡು ನಿಮ್ಮ ಆಯ್ಕೆಯಾಗಿರುತ್ತದೆ. ಯಾವುದೇ ರಾಜ್ಯದ ಮೇಲೆ ಭಾರತ ಸರಕಾರ ಯಾವುದೇ ಭಾಷೆಯನ್ನು ಹೇರುವುದಿಲ್ಲ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.
ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ತ್ರಿಭಾಷಾ ನೀತಿಯನ್ನು ಹೇಗೆ ಜಾರಿಗೆ ತರಲಾಗುತ್ತಿದೆ ಎಂಬ ಪ್ರಶ್ನೆಗೆ, ಉತ್ತರ ಪ್ರದೇಶದಲ್ಲಿ ಓರ್ವ ವಿದ್ಯಾರ್ಥಿ ಹಿಂದಿಯನ್ನು ಮಾತೃಭಾಷೆಯಾಗಿ ಕಲಿಯುತ್ತಾನೆ. ಅದರ ನಂತರ ಅವರು ಮರಾಠಿ ಮತ್ತು ತಮಿಳು ಭಾಷೆಯನ್ನು ಕೂಡ ಕಲಿಯಬಹುದು. ಉತ್ತರಪ್ರದೇಶದಲ್ಲಿ ಕೆಲವು ವಿದ್ಯಾರ್ಥಿಗಳು ತಮಿಳನ್ನು ಮೂರನೇ ಭಾಷೆಯಾಗಿ ಕಲಿಯಬಹುದು. ಯುಪಿ ಸರಕಾರ ತಮಿಳು ಕಲಿಸಲು ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಹೇಳಿದರು.