×
Ad

ನ್ಯಾ.ಯಶ್ವಂತ್ ವರ್ಮ ಪದಚ್ಯುತಿ ನಿರ್ಣಯದ ಪರ ಶೀಘ್ರದಲ್ಲೇ ಕೇಂದ್ರದಿಂದ ಸಂಸದರ ಸಹಿ ಸಂಗ್ರಹ

Update: 2025-07-03 18:50 IST

ಯಶ್ವಂತ್ ವರ್ಮ | PC :  PTI 

ಹೊಸದಿಲ್ಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶ್ವಂತ್ ವರ್ಮರನ್ನು ನ್ಯಾಯಾಧೀಶರ ಹುದ್ದೆಯಿಂದ ಪದಚ್ಯುತಗೊಳಿಸಲು ಪ್ರಮುಖ ವಿರೋಧ ಪಕ್ಷಗಳು ತಮ್ಮ ತಾತ್ವಿಕ ಬೆಂಬಲ ಸೂಚಿಸಿದ್ದು, ಅವರ ಪದಚ್ಯುತಿ ನಿರ್ಣಯದ ಪರ ಸಂಸದರ ಸಹಿ ಸಂಗ್ರಹಿಸುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ಗುರುವಾರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಈ ನಿರ್ಣಯವನ್ನು ರಾಜ್ಯಸಭೆಯಲ್ಲಿ ಮಂಡಿಸಬೇಕೊ ಅಥವಾ ಲೋಕಸಭೆಯಲ್ಲಿ ಮಂಡಿಸಬೇಕೊ ಎಂಬುದನ್ನು ಸರಕಾರವಿನ್ನೂ ನಿರ್ಧರಿಸಬೇಕಿದೆ ಎಂದೂ ಅವರು ಹೇಳಿದ್ದಾರೆ.

ಪದಚ್ಯುತಿ ನಿರ್ಣಯವನ್ನು ಲೋಕಸಭೆಯಲ್ಲಿ ಮಂಡಿಸಲು ಕನಿಷ್ಠ 100 ಮಂದಿ ಲೋಕಸಭಾ ಸಂಸದರ ಸಹಿಯ ಅಗತ್ಯವಿದ್ದರೆ, ರಾಜ್ಯಸಭೆಯಲ್ಲಿ ಮಂಡಿಸಲು ಕನಿಷ್ಠ 50 ಮಂದಿ ರಾಜ್ಯಸಭಾ ಸಂಸದರ ಬೆಂಬಲದ ಅಗತ್ಯವಿದೆ.

ಯಾವ ಸದನದಲ್ಲಿ ಪದಚ್ಯುತಿ ನಿರ್ಣಯ ಮಂಡಿಸಬೇಕು ಎಂಬುದನ್ನು ನಿರ್ಧರಿಸಿದ ನಂತರ, ಸಹಿ ಸಂಗ್ರಹಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಂಸತ್ತಿನ ಮಾನ್ಸೂನ್ ಅಧಿವೇಶನವು ಜುಲೈ 21ರಿಂದ ಪ್ರಾರಂಭಗೊಳ್ಳಲಿದ್ದು, ಆಗಸ್ಟ್ 21ರಂದು ಅಂತ್ಯಗೊಳ್ಳಲಿದೆ.

ನ್ಯಾಯಾಧೀಶರ (ವಿಚಾರಣೆ) ಕಾಯ್ದೆ, 1968ರ ಪ್ರಕಾರ, ಒಂದು ವೇಳೆ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ನಿರ್ಣಯ ಸಂಸತ್ತಿನ ಯಾವುದಾದರೂ ಒಂದು ಸದನದಲ್ಲಿ ಅಂಗೀಕಾರಗೊಂಡ ನಂತರ, ಸ್ಪೀಕರ್ ಅಥವಾ ರಾಜ್ಯಸಭಾಧ್ಯಕ್ಷರು – ಇಬ್ಬರ ಪೈಕಿ ಒಬ್ಬರು ನ್ಯಾಯಾಧೀಶರನ್ನು ಯಾವ ನೆಲೆಯಲ್ಲಿ ಪದಚ್ಯುತಗೊಳಿಸಬೇಕು (ಅಥವಾ ವಾಗ್ದಂಡನೆಗೆ ಗುರಿಯಾಗಿಸಬೇಕು) ಎಂದು ಮನವಿ ಮಾಡಲಾಗಿದೆ ಎಂಬುದರ ಕುರಿತು ತನಿಖೆ ನಡೆಸಲು ತ್ರಿಸದಸ್ಯರ ಸಮಿತಿಯೊಂದನ್ನು ನೇಮಿಸಬೇಕಾಗುತ್ತದೆ.

ಈ ಸಮಿತಿಯು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, 25 ಹೈಕೋರ್ಟ್ ಗಳ ಪೈಕಿ ಓರ್ವ ಮುಖ್ಯ ನ್ಯಾಯಾಧೀಶರು ಹಾಗೂ ಪ್ರತ್ಯೇಕ ನ್ಯಾಯಾಧೀಶರೊಬ್ಬರನ್ನು ಒಳಗೊಂಡಿರಲಿದೆ.

ಈ ವಿಷಯವು ನ್ಯಾಯಾಂಗದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದಾಗಿರುವುದರಿಂದ, ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಈ ಸಮಿತಿಯಲ್ಲಿರಬೇಕು ಎಂಬುದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಅಭಿಪ್ರಾಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News