×
Ad

ಅರಣ್ಯಗಳಲ್ಲಿ ತೈಲ ಶೋಧಕ್ಕೆ ಅನುಮತಿಗೆ ಕೇಂದ್ರದಿಂದ ಮಾರ್ಗಸೂಚಿ ; ರಾಜ್ಯಗಳ ಅಧಿಕಾರದ ಅತಿಕ್ರಮಣ : ತಜ್ಞರು

Update: 2024-12-13 16:53 IST

PC : thewire.in

ಬೆಂಗಳೂರು : ಅರಣ್ಯ ಪ್ರದೇಶಗಳಲ್ಲಿ ತೈಲ ಶೋಧಕ್ಕಾಗಿ ಸರ್ವೆ ಮತ್ತು ಕೊರೆಯುವಿಕೆಯನ್ನು ಕೈಗೊಳ್ಳಲು ಗಣಿಗಾರಿಕೆ ಕಂಪನಿಗಳು ಸಲ್ಲಿಸಿರುವ ಪ್ರಸ್ತಾವಗಳಿಗೆ ಅನುಮೋದನೆ ಪ್ರಕ್ರಿಯೆಯನ್ನು ‘ಸುಗಮಗೊಳಿಸಲು’ ಕೇಂದ್ರ ಪರಿಸರ ಸಚಿವಾಲಯವು ನವಂಬರ್‌ ನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.

ಈ ಹೆಚ್ಚುವರಿ ಮಾರ್ಗಸೂಚಿಗಳು ಅನುಮೋದನೆಗಳ ಸಂಪೂರ್ಣ ಪ್ರಕ್ರಿಯೆಗೆ ವೇಳಾಪಟ್ಟಿಯನ್ನು ನಿಗದಿಗೊಳಿಸಿದೆ. ಇದರಂತೆ ಕಂಪನಿಗಳಿಂದ ಈ ಪ್ರಸ್ತಾವಗಳನ್ನು ಸ್ವೀಕರಿಸುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಅಧಿಕೃತ ನೋಡಲ್ ಅಧಿಕಾರಿಯು ಅವು ಸರ್ವೆ ಪ್ರದೇಶದಲ್ಲಿ 100ಕ್ಕಿಂತ ಕಡಿಮೆ ಮರಗಳ ಕಡಿತವನ್ನು ಒಳಗೊಂಡಿದ್ದರೆ 45 ದಿನಗಳಲ್ಲಿ ಅನುಮತಿಯನ್ನು ಮಂಜೂರು ಮಾಡಲು ಸಾಧ್ಯವಾಗುತ್ತದೆ. ಒಮ್ಮೆ ನೋಡಲ್ ಅಧಿಕಾರಿಯು ಕಂಪನಿಯೊಂದಕ್ಕೆ ಅನುಮತಿ ನೀಡಿದ ಬಳಿಕ ವಿಭಾಗೀಯ ಅರಣ್ಯಾಧಿಕಾರಿಗಳು ಸರ್ವೆಯನ್ನು ಕೈಗೊಳ್ಳಲು ಅದಕ್ಕೆ ಅವಕಾಶ ನೀಡಬೇಕಾಗುತ್ತದೆ.

ಕೇಂದ್ರ ಪರಿಸರ ಸಚಿವಾಲಯದ ಈ ಮಾರ್ಗಸೂಚಿಗಳು ರಾಷ್ಟ್ರೀಯ ಅರಣ್ಯ ನೀತಿಯ ಉಲ್ಲಂಘನೆಯಾಗಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರವನ್ನು ಅತಿಕ್ರಮಿಸುತ್ತದೆ ಎಂದು ಪರಿಸರ ನೀತಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆ ಹಾಗೂ ಅರಣ್ಯ ಭೂಮಿಯಲ್ಲಿ ಇಂತಹ ಯೋಜನೆಗಳಿಗೆ ಅನುಮತಿ ನೀಡುವುದು ಮೊದಲು ರಾಜ್ಯದ ಜವಾಬ್ದಾರಿಯಾಗಿದೆಯೇ ಹೊರತು ಕೇಂದ್ರ ಸರಕಾರದ್ದಲ್ಲ ಎಂದು ಅವರು ಹೇಳಿದ್ದಾರೆ.

ಹೊಸದಾಗಿ ಜಾರಿಗೊಳಿಸಲಾಗಿರುವ ವನ (ಸಂರಕ್ಷಣ ಏವಂ ಸಂವರ್ಧನ) ಅಧಿನಿಯಮ,1980 (ಹಿಂದಿನ ಅರಣ್ಯ ಸಂರಕ್ಷಣಾ ಕಾಯ್ದೆ,1980) ಸರ್ವೆಯನ್ನು ಅರಣ್ಯ ಭೂಮಿಯಲ್ಲಿ ಗಣಿಗಾರಿಕೆಗೆ ಮುನ್ನ ಕೊರೆಯುವಿಕೆ ಸೇರಿದಂತೆ ಕಲ್ಲಿದ್ದಲು,ತೈಲ ಮತ್ತು ಅನಿಲ ಶೋಧಕ್ಕಾಗಿ ನಡೆಸುವ ಯಾವುದೇ ಚಟುವಟಿಕೆ ಎಂದು ವ್ಯಾಖ್ಯಾನಿಸಿದ್ದು, ಇದು ಅಧಿನಿಯಮದ ಕಲಂ 2ರ ಉಪಕಲಂ 2ರಡಿ ವಿನಾಯಿತಿಗೆ ಒಳಪಟ್ಟಿದೆ.

ಕೇಂದ್ರ ಸರಕಾರವು ಆದೇಶದ ಮೂಲಕ ಯಾವುದೇ ಸರ್ವೆಗೆ ಅನ್ವಯಗೊಳ್ಳುವ ನಿಯಮಗಳು ಮತ್ತು ಷರತ್ತುಗಳನ್ನು ನಿರ್ದಿಷ್ಟ ಪಡಿಸಬಹುದು ಮತ್ತು ಇಂತಹ ಸರ್ವೆಯನ್ನು ಅರಣ್ಯೇತರ ಉದ್ದೇಶವೆಂದು ಪರಿಗಣಿಸುವಂತಿಲ್ಲ ಎಂದು ಉಪಕಲಂ 2 ಹೇಳುತ್ತದೆ.

ವಿಪರ್ಯಾಸವೆಂದರೆ ಕೇಂದ್ರವು ಸರ್ವೆಯನ್ನು ಅರಣ್ಯೇತರ ಉದ್ದೇಶದ್ದಲ್ಲ ಎಂದು ವರ್ಗೀಕರಿಸುವ ಅಧಿಕಾರವನ್ನು ಹೊಂದಿದೆ ಎನ್ನುವುದನ್ನು ಇದು ಸೂಚಿಸುತ್ತದೆ ಮತ್ತು ಅದನ್ನು ಅರಣ್ಯ ಉದ್ದೇಶಗಳಿಗಾಗಿ ಕೈಗೊಳ್ಳಲಾಗಿದೆ ಎಂದು ವರ್ಗೀಕರಿಸಬಹುದು.

ಕೇಂದ್ರ ಪರಿಸರ ಸಚಿವಾಲಯವು 2023ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ(ಎಫ್‌ಸಿಎ)ಯನ್ನು ತಿದ್ದುಪಡಿಗೊಳಿಸಿ ವನ ಅಧಿನಿಯಮ, 1980ನ್ನು ತಂದಾಗ ಈ ಉಪಕಲಂ 2ನ್ನು ಅದಕ್ಕೆ ಸೇರಿಸಲಾಗಿತ್ತು.

ವಿಜ್ಞಾನಿಗಳು ಪರಿಸರವಾದಿಗಳು,ನೀತಿತಜ್ಞರು ಮತ್ತು ರಾಜಕಾರಣಿಗಳು 2023ರಲ್ಲಿ ಎಫ್‌ಸಿಎ ತಿದ್ದುಪಡಿ ಕುರಿತು ಹಲವಾರು ಕಳವಳಗಳನ್ನು ವ್ಯಕ್ತಪಡಿಸಿದ್ದರು. ಆದರೂ,ಈ ಪೈಕಿ ಹೆಚ್ಚಿನ ಗುಂಪುಗಳು ‘ಪ್ರಜಾಪ್ರಭುತ್ವ ವಿರೋಧಿ’ ಎಂದು ಬಣ್ಣಿಸಿದ್ದ ಪ್ರಕ್ರಿಯೆ ಮೂಲಕ ತಿದ್ದುಪಡಿಯನ್ನು ತರಲಾಗಿತ್ತು.

ತೈಲ ಶೋಧಕ್ಕಾಗಿ ಸರ್ವೆಗಳು ಮತ್ತು ಪರಿಶೋಧನಾತ್ಮಕ ಕೊರೆಯುವಿಕೆಯನ್ನು ಅರಣ್ಯೇತರ ಉದ್ದೇಶದ್ದು ಎಂದು ಪರಿಗಣಿಸಲಾಗಿಲ್ಲ. ಹೀಗಾಗಿ ಅವು ಅರಣ್ಯ ಅನುಮತಿಗಳಿಂದ ವಿನಾಯಿತಿ ಹೊಂದಿವೆ ಎನ್ನುವುದು ಈ ತಿದ್ದುಪಡಿಯಲ್ಲಿ ಸೇರಿತ್ತು.

ಪರಿಸರ ವ್ಯವಸ್ಥೆ ಮತ್ತು ಅದರ ಸಂರಕ್ಷಣೆ ಮುಖ್ಯವಾಗಿದ್ದು, ಯಾವುದೇ ವಾಣಿಜ್ಯ ಚಟುವಟಿಕೆಯು ನಂತರದ್ದಾಗಿದೆ ಎಂದು ರಾಷ್ಟ್ರೀಯ ಅರಣ್ಯನೀತಿಯು ಸ್ಪಷ್ಟವಾಗಿ ತಿಳಿಸಿದೆ ಎಂದು ಹೇಳಿದ ದಿಲ್ಲಿಯ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯ ಹವಾಮಾನ ಮತ್ತು ಪರಿಸರ ವ್ಯವಸ್ಥೆ ಕಾರ್ಯಕ್ರಮದ ಮುಖ್ಯಸ್ಥ ದೇಬಾದಿತ್ಯೊ ಸಿನ್ಹಾ ಅವರು, ನೂತನ ಮಾರ್ಗಸೂಚಿ ರಾಷ್ಟ್ರೀಯ ಅರಣ್ಯ ನೀತಿಯ ಉಲ್ಲಂಘನೆಯಾಗಿದ್ದು, ಖಂಡಿತವಾಗಿಯೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರದ ಅತಿಕ್ರಮಣವಾಗಿದೆ ಎಂದರು.

ಸೌಜನ್ಯ : thewire.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News