×
Ad

ಚಂದ್ರಯಾನ-3: ವಿಕ್ರಮ್ 2ನೇ ಡಿ-ಬೂಸ್ಟ್ ಯಶಸ್ವಿ; ಆ. 23ರ ಲ್ಯಾಂಡಿಂಗ್ ನತ್ತ ಎಲ್ಲರ ಚಿತ್ತ

Update: 2023-08-20 08:50 IST

Photo:https://twitter.com/isro

ಬೆಂಗಳೂರು: ಮಹತ್ವಾಕಾಂಕ್ಷಿ ಚಂದ್ರಯಾನ-3 ಮಿಷನ್ನ ವಿಕ್ರಂ ಲ್ಯಾಂಡರ್ ಮೋಡ್ (ಎಲ್ಎಂ)ನ ಕಕ್ಷೆಯನ್ನು ಭಾನುವಾರ ನಸುಕಿನ ವೇಳೆ ಕಿರಿದುಗೊಳಿಸುವಲ್ಲಿ ಯಶಸ್ವಿಯಾಗಿದ್ದಾಗಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ. ಇದರಿಂದಾಗಿ ಲ್ಯಾಂಡರ್ ಮತ್ತಷ್ಟು ಚಂದ್ರನ ಸನಿಹಕ್ಕೆ ಬಂದಂತಾಗಿದೆ.

ಆಗಸ್ಟ್ 23ರಂದು ಯೋಜಿತ ನಿಯಂತ್ರಿತ ಲ್ಯಾಂಡಿಂಗ್ ಗೆ ವೇದಿಕೆ ಸಜ್ಜಾಗಿದ್ದು, ಲ್ಯಾಂಡಿಂಗ್ ಮಾಡ್ಯುಲ್ ಆಗಸ್ಟ್ 17ರಂದು ಬೇರ್ಪಟ್ಟ ಬಳಿಕ ಇದೀಗ ಎರಡನೇ ಹಾಗೂ ಅಂತಿಮ ಡಿಬೂಸ್ಟ್ ಅನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.

ಡಿಬೂಸ್ಟಿಂಗ್ ಎಂದರೆ ಕಕ್ಷೆಯಲ್ಲಿ ಲ್ಯಾಂಡರ್ನ ಸ್ಥಾನವನ್ನು ಚಂದ್ರನ ಕಕ್ಷೆಯ ಅತ್ಯಂತ ಸನಿಹದಲ್ಲಿ (ಪೆರಿಲ್ಯುನ್) ನಿಧಾನಗೊಳಿಸುವ ಪ್ರಕ್ರಿಯೆಯಾಗಿದೆ. ಅತ್ಯಂತ ದೂರದ ಕೇಂದ್ರವೆಂದರೆ 100 ಕಿಲೋಮೀಟರ್ ದೂರದ ಅಪೊಲ್ಯೂನ್ ಆಗಿರುತ್ತದೆ.

"ಎರಡನೇ ಮತ್ತು ಅಂತಿಮ ಡಿಬೂಸ್ಟಿಂಗ್ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಲ್ಯಾಂಡಿಂಗ್ ಮಾಡ್ಯೂಲ್ ಅನ್ನು ಲ್ಯಾಂಡಿಂಗ್ ಮಾಡ್ಯೂಲ್ ಕಕ್ಷೆಗೆ ಅಂದರೆ 25 ಕಿಲೋಮೀಟರ್* 134 ಕಿಲೋಮೀಟರ್ಗೆ ಯಶಸ್ವಿಯಾಗಿ ಇಳಿಸಲಾಗಿದೆ. ಈ ಹಂತದಲ್ಲಿ ಮಾಡ್ಯೂಲ್ ಆಂತರಿಕ ತಪಾಸಣೆಗಳನ್ನು ಮಾಡಿಕೊಂಡು, ನಿಯೋಜಿತ ಲ್ಯಾಂಡಿಂಗ್ ಜಾಗದಲ್ಲಿ ಸೂರ್ಯೋದಯದವರೆಗೆ ಕಾಯಲಿದೆ. ಆಗಸ್ಟ್ 23ರಂದು ಸಂಜೆ 5.45ರ ವೇಳೆಗೆ ಚಂದ್ರನ ಮೇಲ್ಮೈನಲ್ಲಿ ಲ್ಯಾಂಡರ್ ಇಳಿಸುವ ಪ್ರಕ್ರಿಯೆ ಆರಂಭವಾಗಲಿದೆ" ಎಂದು ಇಸ್ರೊ ಸ್ಪಷ್ಟಪಡಿಸಿದೆ.

ತನ್ನ ಹಿಂಭಾಗದಲ್ಲಿ ಪ್ರಜ್ಞಾನ್ ರೋವರ್ ಹೊಂದಿರುವ ಈ ಲ್ಯಾಂಡರ್ ಶುಕ್ರವಾರ ತನ್ನ ಮೊದಲ ಕಾರ್ಯಾಚರಣೆಯನ್ನು ಆರಂಭಿಸಿ 113 ಕಿಲೋಮೀಟರ್ * 157 ಕಿಲೋಮೀಟರ್ ಕಕ್ಷೆಯನ್ನು ಪ್ರವೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News