×
Ad

ಛತ್ತೀಸ್‌ಗಢ: 80 ದಿನಗಳಲ್ಲಿ 113 ನಕ್ಸಲರ ಹತ್ಯೆ

Update: 2025-03-21 08:00 IST

PC: x.com/nadimpalli

ರಾಯಪುರ: ಛತ್ತೀಸ್‌ಗಢದ ಬಸ್ತರ್ ವಿಭಾಗದ ಬಿಜಾಪುರ ಮತ್ತು ಕಂಕೇರ್ ಜಿಲ್ಲೆಗಳಲ್ಲಿ ಗುರುವಾರ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್ ಗಳಲ್ಲಿ ಕನಿಷ್ಠ 30 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ.

ಬಿಜಾಪುರದ ಗಂಗಲೂರಿನಲ್ಲಿ ಬಹುದೊಡ್ಡ ಎನ್ಕೌಂಟರ್ ನಡೆದಿದ್ದು, ಮಾರ್ಚ್ 3ರಂದು ನಕ್ಸಲ್ ಕಮಾಂಡರ್ ದಿನೇಶ್ ಮೊದಿಯಮ್ ಶರಣಾದ ಬಳಿಕ ನಡೆದ ಅತಿದೊಡ್ಡ ದಾಳಿ ಇದಾಗಿದೆ. ಮೊದಿಯಮ್ ನ 26 ಮಂದಿ ಮಾಜಿ ಕಾಮ್ರೇಡ್ ಗಳು ಈ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 300 ಕಿಲೋಮೀಟರ್ ಅಂತರದ ಬಿಜಾಪುರ ಹಾಗೂ ಕಂಕೇರ್ ನಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಛತ್ತೀಸ್‌ಗಢದಲ್ಲಿ ಕಳೆದ ಎಂಬತ್ತು ದಿನಗಳ ಅವಧಿಯಲ್ಲಿ ಭದ್ರತಾ ಪಡೆಗಳು 113 ಮಂದಿ ನಕ್ಸಲರನ್ನು ಕೊಂದು ಹಾಕಿದ್ದಾರೆ. ಈ ಪೈಕಿ 91 ಮಂದಿ ಬಿಜಾಪುರ ಜಿಲ್ಲೆಯಲ್ಲಿ ಹತ್ಯೆಗೀಡಾಗಿದ್ದಾರೆ. ಬಸ್ತರ್ ವಿಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ 287 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ.

ಭದ್ರತಾ ಪಡೆಗಳ ಶೌರ್ಯವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಕೊಂಡಾಡಿದ್ದಾರೆ. "ನಕ್ಸಲ್ ಮುಕ್ತ ಭಾರತ ಅಭಿಯಾನದ ನಿಟಿನಲ್ಲಿ ನಮ್ಮ ಸೈನಿಕರು ಮತ್ತೊಂದು ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಛತ್ತೀಸ್‌ಗಢದ ಬಿಜಾಪುರ ಮತ್ತು ಕಂಕೇರ್ ನಲ್ಲಿ ಎರಡು ಬಾರಿ ನಡೆದ  ಕಾರ್ಯಾಚರಣೆಗಳಲ್ಲಿ ಹಲವು ಮಂದಿ ನಕ್ಸಲರು ಸಾವಿಗೀಡಾಗಿದ್ದಾರೆ. ನಕ್ಸಲರ ವಿರುದ್ಧ ನಿರ್ದಯ ದೃಷ್ಟಿಕೋನವನ್ನು ಹೊಂದಿ ಮೋದಿ ಸರ್ಕಾರ ಮುನ್ನಡೆಯುತ್ತಿದೆ. ಶರಣಾಗತಿ ಮತ್ತು ಸೇರ್ಪಡೆಗೆ ಹಲವು ಸೌಲಭ್ಯಗಳನ್ನು ನೀಡಿದ ಹೊರತಾಗಿಯೂ, ಶರಣಾಗದ ನಕ್ಸಲರ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಸರ್ಕಾರ ಹೊಂದಿದೆ. ಮುಂದಿನ ವರ್ಷದ ಮಾರ್ಚ್ 31ರ ಒಳಗಾಗಿ ದೇಶ ನಕ್ಸಲ್ ಮುಕ್ತವಾಗಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News