ಛತ್ತೀಸ್‌ಗಡ: ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಐವರಿಗೆ ಮರಣ ದಂಡನೆ
ಸಾಂದರ್ಭಿಕ ಚಿತ್ರ
ಕೊರ್ಬಾ: ಛತ್ತೀಸ್‌ಗಡದ ಕೊರ್ಬಾ ಜಿಲ್ಲೆಯ ತ್ವರಿತ ನ್ಯಾಯಾಲಯವು 2021ರಲ್ಲಿ 16ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಮತ್ತು ಆಕೆಯ ಕುಟುಂಬದ ಇಬ್ಬರು ಸದಸ್ಯರನ್ನು ಕೊಲೆ ಮಾಡಿದ್ದಕ್ಕಾಗಿ ಐವರಿಗೆ ಮರಣ ದಂಡನೆಯನ್ನು ವಿಧಿಸಿದೆ. ಇನ್ನೋರ್ವ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಗಿದೆ.
ಸಂತರಾನ ಮಂಜ್ವಾರ್(49), ಅಬ್ದುಲ್ ಜಬ್ಬಾರ್(34), ಅನಿಲಕುಮಾರ ಸಾರ್ಥಿ(24), ಪರದೇಶಿ ರಾಮ(39) ಮತ್ತು ಆನಂದ ರಾಮ ಪನಿಕ(29) ಮರಣದಂಡನೆಗೆ ಗುರಿಯಾಗಿದ್ದರೆ ಉಮಾಶಂಕರ ಯಾದವ (26) ಜೀವಾವಧಿ ಶಿಕ್ಷೆಯನ್ನು ಪಡೆದಿದ್ದಾನೆ.
2021,ಜ.29ರಂದು ಕೊರ್ಬಾ ಜಿಲ್ಲೆಯ ಗಡ ಉಪ್ರೋಡಾ ಗ್ರಾಮದಲ್ಲಿ ಹದಿಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ದುಷ್ಕರ್ಮಿಗಳು ಬಳಿಕ ಆಕೆಯ ಮೇಲೆ ಕಲ್ಲುಗಳನ್ನು ಎತ್ತಿ ಹಾಕಿ ಅರಣ್ಯದಲ್ಲಿ ಎಸೆದು ಹೋಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು. ಆರೋಪಿಗಳು ಬಾಲಕಿಯ ಜೊತೆಯಲ್ಲಿದ್ದ 60ರ ಹರೆಯದ ತಂದೆ ಮತ್ತು ನಾಲ್ಕರ ಹರೆಯದ ಆತನ ಮೊಮ್ಮಗಳನ್ನೂ ಕೊಂದಿದ್ದರು.
ಬಾಲಕಿಯ ಸೋದರ ಲೆಮ್ರು ಪೋಲಿಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ ಬಳಿಕ ಈ ಬರ್ಬರ ಘಟನೆ ಬೆಳಕಿಗೆ ಬಂದಿತ್ತು. ತನಿಖೆಯ ಬಳಿಕ ಪೋಲಿಸರು ಆರು ಜನರನ್ನು ಬಂಧಿಸಿದ್ದರು.
ಮುಖ್ಯ ಆರೋಪಿ ಮಂಜ್ವಾರ್ ತನ್ನ ಜಾನುವಾರುಗಳನ್ನು ಮೇಯಿಸಲು ಪಹಾಡಿ ಕೋರ್ವಾ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಾಲಕಿಯ ಕುಟುಂಬವನ್ನು ನೇಮಿಸಿಕೊಂಡಿದ್ದು,ತನ್ನ ಎರಡನೇ ಪತ್ನಿಯಾಗುವಂತೆ ಆಕೆಯನ್ನು ಒತ್ತಾಯಿಸುತ್ತಿದ್ದ. ಬಾಲಕಿ ಮತ್ತು ಆಕೆಯ ಕುಟುಂಬ ಇದನ್ನು ವಿರೋಧಿಸಿದಾಗ ಮಂಜ್ವಾರ್ ಮತ್ತು ಆತನ ಐವರು ಸಹಚರರು ಆಕೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಜೊತೆಗೆ ಕುಟುಂಬದ ಇತರ ಇಬ್ಬರನ್ನೂ ಹತ್ಯೆ ಮಾಡಿದ್ದರು ಎಂದು ವಿಶೇಷ ಸರಕಾರಿ ಅಭಿಯೋಜಕ ಸುನಿಲಕುಮಾರ ಮಿಶ್ರಾ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.