Chhattisgarh| ಮಾಲ್‌ಗೆ ನುಗ್ಗಿ ಕ್ರಿಸ್ಮಸ್ ಅಲಂಕಾರಗಳನ್ನು ಧ್ವಂಸಗೊಳಿಸಿದ್ದ 7 ಬಜರಂಗದಳ ಕಾರ್ಯಕರ್ತರಿಗೆ ಜಾಮೀನು ನಿರಾಕರಣೆ
Photo Credit : NDTV
ರಾಯ್ಪುರ: ಕಳೆದ ವಾರ ಛತ್ತೀಸ್‌ಗಢದ ರಾಜಧಾನಿಯಲ್ಲಿರುವ ಮ್ಯಾಗ್ನೆಟೋ ಮಾಲ್‌ನಲ್ಲಿ ಕ್ರಿಸ್ಮಸ್ ಅಲಂಕಾರಗಳನ್ನು ಧ್ವಂಸಗೈದ ಆರೋಪದಲ್ಲಿ ಬಂಧಿತ 7 ಬಜರಂಗದಳದ ಕಾರ್ಯಕರ್ತರಿಗೆ ರಾಯ್ಪುರದ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಈ ಘಟನೆ ಬುಧವಾರ ನಡೆದಿದ್ದು, ತೆಲಿಬಂಧ ಪೊಲೀಸ್ ಠಾಣೆಯಲ್ಲಿ 30 ರಿಂದ 40 ಅಪರಿಚಿತ ವ್ಯಕ್ತಿಗಳ ವಿರುದ್ಧ ಬಿಎನ್ಎಸ್ ಸೆಕ್ಷನ್ 331(3), 324(2), 115(2), 191(2) ಮತ್ತು 190ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ತೆಲಿಬಂಧ ಠಾಣೆ ಪೊಲೀಸರು, ಶನಿವಾರ 7 ಮಂದಿ ಬಲಪಂಥೀಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ಆರೋಪಿಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಸೋಮವಾರ ಏಳು ಆರೋಪಿಗಳನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿದೆ.
ಬುಧವಾರ ಛತ್ತೀಸ್‌ಗಢದಲ್ಲಿ ಧಾರ್ಮಿಕ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಬಲಪಂಥೀಯ ಕಾರ್ಯಕರ್ತರ ಗುಂಪು ಒಂದು ದಿನ ಬಂದ್‌ಗೆ ಕರೆ ನೀಡಿತ್ತು. ಈ ವೇಳೆ ಶಸ್ತ್ರಸಜ್ಜಿತ ಗುಂಪು ಮ್ಯಾಗ್ನೆಟೋ ಮಾಲ್‌ಗೆ ನುಗ್ಗಿ ಕ್ರಿಸ್ಮಸ್ ಅಲಂಕಾರಗಳನ್ನು ಧ್ವಂಸಗೊಳಿಸಿದೆ.