ಛತ್ತೀಸ್ ಗಢ | ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗ: 14 ಮಾವೋವಾದಿಗಳ ಹತ್ಯೆ
ಸಾಂದರ್ಭಿಕ ಚಿತ್ರ | Photo Credit : PTI
ರಾಯ್ಪುರ್: ಶನಿವಾರ ಛತ್ತೀಸ್ ಗಢದ ಸುಕ್ಮಾ ಹಾಗೂ ಬಿಜಾಪುರ್ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಪ್ರತ್ಯೇಕ ಗುಂಡಿನ ಕಾಳಗದಲ್ಲಿ ಕನಿಷ್ಠ 14 ಮಂದಿ ಮಾವೋವಾದಿಗಳು ಹತರಾಗಿದ್ದಾರೆ. 2026ರ ಪ್ರಥಮ ಮಹತ್ವದ ಮಾವೋವಾದಿ ನಿಗ್ರಹ ಕಾರ್ಯಾಚರಣೆ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜಾಪುರ ಜಿಲ್ಲೆಯ ಬಸಾಗುಡ-ಟಾರ್ರೆಮ್ ಅರಣ್ಯ ಪ್ರದೇಶ ಹಾಗೂ ಸುಕ್ಮಾ ಜಿಲ್ಲೆಯ ಕೊಂಟಾ-ಕಿಸ್ತರಾಮ್ ಅರಣ್ಯಗಳಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಗುಪ್ತಚರ ಸುಳಿವನ್ನಾಧರಿಸಿ ರಾಯ್ಪುರ್ ನಿಂದ ಸುಮಾರು 450 ಕಿಮೀ ದೂರದಲ್ಲಿ ಈ ಎರಡು ಪ್ರತ್ಯೇಕ ಎನ್ ಕೌಂಟರ್ ಗಳು ನಡೆದಿವೆ. ಜಿಲ್ಲಾ ಮೀಸಲು ಪಡೆಯ ಪ್ರತ್ಯೇಕ ತಂಡಗಳು ತಮಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡವು. ಇದರಿಂದಾಗಿ, ಶನಿವಾರ ಮಾವೋವಾದಿಗಳು ಹಾಗೂ ಭದ್ರತಾ ಪಡೆಗಳ ನಡುವೆ, ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಸ್ತರ್ ವಲಯದ ಪೊಲೀಸ್ ಮಹಾನಿರೀಕ್ಷಕ ಸುಂದರ್ ರಾಜ್ ಪಟ್ಟಿಲಿಂಗಂ, “ಈವರೆಗೆ ಗುಂಡಿನ ಕಾಳಗ ನಡೆದ ಸುಕ್ಮಾ ಪ್ರದೇಶದಿಂದ 12 ಮಾವೋವಾದಿಗಳು ಹಾಗೂ ಬಿಜಾಪುರ್ ಪ್ರದೇಶದಿಂದ ಇಬ್ಬರು ಮಾವೋವಾದಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನಾ ಸ್ಥಳದಿಂದ ಎಕೆ-47, ಇನ್ಸಾಸ್ ಅಸಾಲ್ಟ್ ರೈಫಲ್, ಸ್ವಯಂಚಾಲಿತವಾಗಿ ಭರ್ತಿಯಾಗುವ ರೈಫಲ್ ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಅಲಾಗಿದೆ” ಎಂದು ತಿಳಿಸಿದ್ದಾರೆ.
ಎರಡೂ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಈಗಲೂ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮಾವೋವಾದಿ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಭದ್ರತಾ ಪಡೆಗಳ ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯಾಚರಣೆಯ ಕುರಿತು ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಾಗಿಲ್ಲ.