×
Ad

Chhattisgarh |ಮ್ಯಾಗ್ನೆಟೋ ಮಾಲ್‌ನಲ್ಲಿ ಕ್ರಿಸ್‌ಮಸ್ ಅಲಂಕಾರಗಳ ಧ್ವಂಸ ಪ್ರಕರಣ: ಜೈಲಿನಿಂದ ಬಿಡುಗಡೆಗೊಂಡ ಬಜರಂಗದಳದ ಕಾರ್ಯಕರ್ತರಿಗೆ ಹೂಹಾರ ಹಾಕಿ ಮೆರವಣಿಗೆ!

Update: 2026-01-03 20:21 IST

Photo Credit : indianexpress.com

ರಾಯ್ ಪುರ: ಛತ್ತೀಸ್‌ಗಢದ ರಾಜಧಾನಿ ರಾಯ್‌ ಪುರದ ಮ್ಯಾಗ್ನೆಟೋ ಮಾಲ್‌ ನಲ್ಲಿ ಕ್ರಿಸ್‌ಮಸ್ ಅಲಂಕಾರಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ 6 ಮಂದಿ ಬಜರಂಗದಳದ ಸದಸ್ಯರಿಗೆ ಬುಧವಾರ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜೈಲಿನಿಂದ ಬಿಡುಗಡೆಗೊಂಡ ತಕ್ಷಣ ಅವರಿಗೆ ಹೂಹಾರ ಹಾಕಿ ಮೆರವಣಿಗೆ ಮಾಡಿ ಸ್ವಾಗತ ನೀಡಲಾಗಿದೆ.

ಗುರುವಾರ ರಾಯ್‌ ಪುರ ನಗರದಲ್ಲಿ ಜೈಲಿನಿಂದ ಹೊರಬಂದ ಆರೋಪಿಗಳನ್ನು ಬಜರಂಗದಳದ ಕಾರ್ಯಕರ್ತರು ಹಾರ ಹಾಕಿ, “ರಘು ಪತಿ ರಾಘವ ರಾಜಾ ರಾಮ್” ಘೋಷಣೆಗಳೊಂದಿಗೆ ಸ್ವಾಗತಿಸಿದರು. ಜಾಮೀನು ದೊರೆತಿರುವುದನ್ನು ಸಂಭ್ರಮಿಸುವ ಉದ್ದೇಶದಿಂದ ಆರು ಆರೋಪಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಲಾಯಿತು.

ಈ ಕುರಿತು ಪ್ರತಿಕ್ರಿಯಿಸಿದ ಬಜರಂಗದಳ ರಾಜ್ಯ ಸಂಯೋಜಕ ರಿಷಿ ಮಿಶ್ರಾ, ಮೆರವಣಿಗೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು. “ಅವರ ವಿರುದ್ಧ ಘೋಷಣೆಗಳನ್ನು ಕೂಗುವುದರಲ್ಲಿ ತಪ್ಪೇನಿದೆ? ಇಡೀ ವಿಷಯವು ಛತ್ತೀಸ್‌ ಗಢದಲ್ಲಿ ನಡೆದಿರುವ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದೆ. ಎಲ್ಲಾ (ಬಲಪಂಥೀಯ) ಸಂಘಟನೆಗಳು ಬಂದ್‌ ಗೆ ಕರೆ ನೀಡಲು ನಿರ್ಧರಿಸಿದ್ದವು. ಆದರೆ ಪಿತೂರಿ ನಡೆಸಿ ನಮ್ಮ ಸದಸ್ಯರನ್ನು ಜೈಲಿಗೆ ಹಾಕಲಾಯಿತು. ಆದ್ದರಿಂದ ಈ ಬಗ್ಗೆ ಸಂಭ್ರಮಿಸಲಾಗುತ್ತದೆ,” ಎಂದು ಹೇಳಿದರು.

ಇದಕ್ಕೂ ಮೊದಲು, ಡಿಸೆಂಬರ್ 29ರಂದು ರಾಯ್‌ಪುರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು. ಕ್ರಿಸ್‌ಮಸ್ ಮುನ್ನಾದಿನದಂದು, ಛತ್ತೀಸ್‌ ಗಢದಲ್ಲಿ ನಡೆಯುತ್ತಿರುವ ಧಾರ್ಮಿಕ ಮತಾಂತರಗಳನ್ನು ವಿರೋಧಿಸಿ ಬಲಪಂಥೀಯ ಸಂಘಟನೆಗಳು ಒಂದು ದಿನದ ರಾಜ್ಯವ್ಯಾಪಿ ಬಂದ್‌ ಗೆ ಕರೆ ನೀಡಿದ್ದವು.

ಅದೇ ದಿನ, ಮರದ ಕೋಲುಗಳನ್ನು ಹಿಡಿದುಕೊಂಡ ಶಸ್ತ್ರಸಜ್ಜಿತ ಗುಂಪೊಂದು ಜನಪ್ರಿಯ ಹಾಗೂ ಹಳೆಯ ವ್ಯಾಪಾರ ಕೇಂದ್ರವಾಗಿರುವ ಮ್ಯಾಗ್ನೆಟೋ ಮಾಲ್‌ ಗೆ ನುಗ್ಗಿ ಕ್ರಿಸ್‌ಮಸ್ ಅಲಂಕಾರಗಳು ಹಾಗೂ ಪ್ರತಿಮೆಗಳನ್ನು ಧ್ವಂಸಗೊಳಿಸಿತು. ಮಾಲ್‌ ನಲ್ಲಿ ಸಾಂತಾ ಕ್ಲಾಸ್, ರೆನ್‌ಡೀಯರ್‌ಗಳು, ಜಾರುಬಂಡಿಗಳು ಹಾಗೂ ಹಿಮಮಾನವರ ಪ್ರತಿಮೆಗಳನ್ನು ಅಳವಡಿಸಲಾಗಿತ್ತು. ಮಾಲ್‌ನ ಭದ್ರತಾ ಸಿಬ್ಬಂದಿ ಗುಂಪನ್ನು ತಡೆಯಲು ಯತ್ನಿಸಿದರೂ, ಅದು ಸಾಧ್ಯವಾಗಲಿಲ್ಲ.

ಅದೇ ರಾತ್ರಿ, ತೆಲಿಬಂಧ ಪೊಲೀಸ್ ಠಾಣೆಯಲ್ಲಿ 30 ರಿಂದ 40 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಸೆಕ್ಷನ್‌ ಗಳು ಅತಿಕ್ರಮಣ, ಉದ್ದೇಶಪೂರ್ವಕ ಹಾನಿ, ನಷ್ಟ ಉಂಟುಮಾಡುವುದು, ನೋವುಂಟುಮಾಡುವುದು, ಗಲಭೆ ಹಾಗೂ ಕಾನೂನುಬಾಹಿರ ಸಭೆಗೆ ಸಂಬಂಧಿಸಿದವುಗಳಾಗಿವೆ.

ಡಿ. 27ರಂದು ತೆಲಿಬಂಧ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಿದ್ದು, ಒಬ್ಬ ಅಪ್ರಾಪ್ತನನ್ನೂ ವಶಕ್ಕೆ ಪಡೆದಿದ್ದರು. ಬಂಧಿತ ಆರು ಆರೋಪಿಗಳು ಐದು ದಿನಗಳ ಕಾಲ ಜೈಲಿನಲ್ಲಿದ್ದರು.

ಬಂಧನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸುಮಾರು 300 ಬಜರಂಗದಳ ಕಾರ್ಯಕರ್ತರು ತೆಲಿಬಂಧ ಪೊಲೀಸ್ ಠಾಣೆ ಹೊರಗಿನ ರಸ್ತೆಯಲ್ಲಿ ಕುಳಿತುಕೊಂಡು ಸುಮಾರು 9 ಗಂಟೆಗಳ ಕಾಲ ಸಂಚಾರ ತಡೆ ನಡೆಸಿದರು. ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

ಡಿಸೆಂಬರ್ 24ರಂದು ‘ಸರ್ವ ಹಿಂದೂ ಸಮಾಜ’ ಕರೆ ನೀಡಿದ್ದ ‘ಛತ್ತೀಸ್‌ಗಢ ಬಂದ್’ ಬಸ್ತಾರ್ ಪ್ರದೇಶದ ಕಾಂಕೇರ್ ಜಿಲ್ಲೆಯಲ್ಲಿ ಮತಾಂತರಗೊಂಡ ಕುಟುಂಬದ ವ್ಯಕ್ತಿಯೊಬ್ಬರ ಸಮಾಧಿಗೆ ಸಂಬಂಧಿಸಿ ಇತ್ತೀಚೆಗೆ ನಡೆದ ಎರಡು ಸಮುದಾಯಗಳ ನಡುವಿನ ಘರ್ಷಣೆಯಿಂದ ಪ್ರಚೋದಿತವಾಗಿತ್ತು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News