×
Ad

ಪೋಲಿಸ್ ಭಾಷೆಯಲ್ಲಿ ಉರ್ದು-ಪರ್ಷಿಯನ್ ಬದಲಿಗೆ ಸರಳ ಹಿಂದಿ ಪದಗಳನ್ನು ಸೇರಿಸಿದ ಛತ್ತೀಸ್‌ಗಡ ಸರಕಾರ

Update: 2025-06-14 15:43 IST

ಸಾಂದರ್ಭಿಕ ಚಿತ್ರ | PTI

 

ರಾಯಪುರ: ಪೋಲಿಸ್ ಸೇವೆಯನ್ನು ಹೆಚ್ಚು ಪಾರದರ್ಶಕ ಮತ್ತು ಸಂವಹನಶೀಲವನ್ನಾಗಿಸಲು ಛತ್ತೀಸ್‌ಗಡ ಸರಕಾರವು ಅಧಿಕೃತ ಪೋಲಿಸ್ ದಾಖಲೆಗಳಲ್ಲಿ ಬಳಕೆಯಾಗುತ್ತಿದ್ದ ಉರ್ದು ಮತ್ತು ಪರ್ಷಿಯನ್ ಪದಗಳ ಬದಲಿಗೆ ಸಾಮಾನ್ಯ ವ್ಯಕ್ತಿಗಳು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾದ ಹಿಂದಿ ಪದಗಳನ್ನು ಪರಿಚಯಿಸಿದೆ ಎಂದು ಅಧಿಕಾರಿಯೋರ್ವರು ಶನಿವಾರ ಇಲ್ಲಿ ತಿಳಿಸಿದರು.

ಉದಾಹರಣೆಗೆ ‘ಹಲಾಫ್‌ನಾಮಾ’ವನ್ನು ‘ಶಪಥಪತ್ರ (ಅಫಿಡವಿಟ್)’,‘ದಫಾ’ ಅನ್ನು ‘ಧಾರಾ(ಕಲಂ)’, ‘ಫರಿಯಾದಿ’ಯನ್ನು ‘ಶಿಕಾಯತ್‌ಕರ್ತಾ(ದೂರುದಾರ)’, ಮತ್ತು ‘ಚಸ್ಮದೀದ್’ ಅನ್ನು ‘ಪ್ರತ್ಯಕ್ಷದರ್ಶಿ’ ಎಂದು ಬದಲಿಸಲಾಗಿದೆ.

ಗೃಹಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ವಿಜಯ ಶರ್ಮಾ ಅವರ ಸೂಚನೆಯ ಮೇರೆಗೆ ಪೋಲಿಸ್ ಮಹಾ ನಿರ್ದೇಶಕರು(ಡಿಜಿಪಿ) ಜಿಲ್ಲಾ ಪೋಲಿಸ್ ಅಧೀಕ್ಷಕ(ಎಸ್‌ಪಿ)ರಿಗೆ ಪತ್ರವನ್ನು ಬರೆದಿದ್ದು,ಪೋಲಿಸರ ಕಾರ್ಯ ನಿರ್ವಹಣೆಯಲ್ಲಿ ಬಳಸಲಾಗುತ್ತಿರುವ ಕಠಿಣ ಮತ್ತು ಸಾಂಪ್ರದಾಯಿಕ ಪದಗಳನ್ನು ಸರಳ ಮತ್ತು ಸ್ಪಷ್ಟ ಹಿಂದಿ ಪದಗಳೊಂದಿಗೆ ಬದಲಿಸುವಂತೆ ಸೂಚಿಸಿದ್ದಾರೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಪತ್ರದೊಂದಿಗೆ ಹಳೆಯ ಕಠಿಣ ಪದಗಳ ಬದಲಿಗೆ ಬಳಸಬೇಕಾದ 109 ಹಿಂದಿ ಪರ್ಯಾಯ ಪದಗಳ ಪಟ್ಟಿಯನ್ನು ಒದಗಿಸಲಾಗಿದೆ.

ಸಾಮಾನ್ಯ ನಾಗರಿಕರು ಯಾವುದೇ ದೂರು,ಅಪರಾಧ ಮಾಹಿತಿ ಅಥವಾ ಇತರ ಕೆಲಸಕ್ಕೆ ಸಂಬಂಧಿಸಿದಂತೆ ಪೋಲಿಸ್ ಠಾಣೆಗೆ ಭೇಟಿ ನೀಡಿದಾಗ ಎಫ್‌ಐಆರ್ ಅಥವಾ ಪೋಲಿಸ್ ದಾಖಲೆಗಳಲ್ಲಿ ಬಳಸಲಾದ ಭಾಷೆಯ ಬಗ್ಗೆ ಗೊಂದಲಕ್ಕೀಡಾಗುತ್ತಾರೆ. ಇತರ ಭಾಷೆಗಳ ಪದಗಳು ಸಾಮಾನ್ಯ ಜನರಿಗೆ ತಿಳಿದಿಲ್ಲ,ಹೀಗಾಗಿ ಅವರಿಗೆ ತಾವು ಹೇಳಬೇಕಾದ್ದನ್ನು ಸರಿಯಾಗಿ ವಿವರಿಸಲು ಅಥವಾ ಇಡೀ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಾಗರಿಕರಿಗೆ ನೆರವಾಗುವುದು ಮತ್ತು ರಕ್ಷಿಸುವುದು ಪೋಲಿಸ್ ಇಲಾಖೆಯ ಉದ್ದೇಶವಾಗಿದ್ದರೆ ಅವರ ಭಾಷೆಯೂ ನಾಗರಿಕರಿಗೆ ಅರ್ಥವಾಗುವಂತಿರಬೇಕು ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಿರಬೇಕು ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಉಪಮುಖ್ಯಮಂತ್ರಿ ಶರ್ಮಾ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News