×
Ad

ಜಮ್ಮುವಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ

Update: 2025-05-09 22:54 IST

 ಉಮರ್ ಅಬ್ದುಲ್ಲಾ | PTI 

ಜಮ್ಮು: ಜಮ್ಮುವಿನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ಡ್ರೋನ್ ದಾಳಿ ಹಾಗೂ ಜಮ್ಮುವಿನ ಗಡಿ ಜಿಲ್ಲೆಗಳಲ್ಲಿ ತೀವ್ರ ಶೆಲ್ ದಾಳಿ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಲು ಜಮ್ಮು ಹಾಗೂ ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಶುಕ್ರವಾರ ಜಮ್ಮುವಿಗೆ ಭೇಟಿ ನೀಡಿದ್ದಾರೆ.

ಶಿಬಿರಗಳಿಗೆ ಸ್ಥಳಾಂತರಗೊಂಡ ಸಾರ್ವಜನಿಕರಿಗೆ ಒದಗಿಸಲಾದ ಸೌಲಭ್ಯಗಳನ್ನು ಪರಿಶೀಲಿಸಲು ಜಮ್ಮು ಹಾಗೂ ಸಾಂಬಾ ಜಿಲ್ಲೆಗಳಲ್ಲಿರುವ ಹಲವು ಶಿಬಿರಗಳು ಹಾಗೂ ವಸತಿ ಕೇಂದ್ರಗಳಿಗೆ ಅವರು ಭೇಟಿ ನೀಡಿದರು.

ಅವರು ಸ್ಥಳಾಂತರಗೊಂಡ ಕುಟುಂಬಗಳೊಂದಿಗೆ ಮಾತುಕತೆ ನಡೆಸಿದರು. ಆಹಾರ, ವಸತಿ, ವೈದ್ಯಕೀಯ ನೆರವು ಹಾಗೂ ಇತರ ಅಗತ್ಯತೆಗಳ ಲಭ್ಯತೆ ಕುರಿತು ಪರಿಶೀಲನೆ ನಡೆಸಿದರು.

ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಹೊಸ ಅವಶ್ಯಕತೆಗಳ ಕುರಿತು ಗಮನ ಹರಿಸುವಂತೆ ಹಾಗೂ ಅವುಗಳನ್ನು ಪರಿಹರಿಸಲು ಸಿದ್ಧವಾಗಿರುವಂತೆ ಅವರು ಆಡಳಿತಕ್ಕೆ ನಿರ್ದೇಶಿಸಿದ್ದಾರೆ.

ಸಮಗ್ರ ಪರಿಸ್ಥಿತಿ ಹಾಗೂ ಪರಿಹಾರ ಕ್ರಮಗಳನ್ನು ಪರಿಶೀಲಿಸಲು ಹಿರಿಯ ಜಿಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಉಮರ್ ಅಬ್ದುಲಾ ಅವರು, ಸಂತ್ರಸ್ತ ನಾಗರಿಕರ ಸುರಕ್ಷೆ ಹಾಗೂ ಕಲ್ಯಾಣದಲ್ಲಿ ಸರಕಾರದ ಬದ್ಧತೆಯನ್ನು ಮರು ಉಚ್ಚರಿಸಿದರು.

ಜಮ್ಮು ಹಾಗೂ ಕಾಶ್ಮೀರದ ಹಲವು ಸ್ಥಳಗಳಲ್ಲಿ ಗುರುವಾರ ರಾತ್ರಿ ಪಾಕಿಸ್ತಾನ ನಡೆಸಿದ ದಾಳಿಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿದ ಸೇನಾ ಪಡೆಗಳನ್ನು ಉಮರ್ ಅಬ್ದುಲ್ಲಾ ಅವರು ಪ್ರಶಂಸಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News