ತೆಲಂಗಾಣ ಸ್ಫೋಟ ಪ್ರಕರಣ | ಸರಕಾರ, ಕಂಪೆನಿಯಿಂದ ಮೃತರ ಕುಟುಂಬಗಳಿಗೆ ಒಂದು ಕೋಟಿ ರೂಪಾಯಿ ಪರಿಹಾರ: ಮುಖ್ಯಮಂತ್ರಿ ರೆಡ್ಡಿ
ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ | PC : PTI
ಹೈದರಾಬಾದ್: ಸೋಮವಾರ ಪಾಶಮೈಲಾರಮ್ ನಲ್ಲಿಯ ಔಷಧಿ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಒಂದು ಕೋಟಿ ರೂಪಾಯಿ ಪರಿಹಾರವನ್ನು ಖಚಿತಪಡಿಸಲು ತನ್ನ ಸರಕಾರವು ಸಿಗಾಚಿ ಇಂಡಸ್ಟ್ರೀಸ್ ಲಿ.ನ ಆಡಳಿತ ಮಂಡಳಿಯೊಂದಿಗೆ ಮಾತುಕತೆಗಳನ್ನು ನಡೆಸಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿಯವರು ಮಂಗಳವಾರ ತಿಳಿಸಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ರೆಡ್ಡಿ, ಸ್ಫೋಟದಲ್ಲಿ ಮೃತರ ಸಂಖ್ಯೆ 36 ಕ್ಕೇರಿದೆ ಎಂದು ಹೇಳಿದರು. ಗಂಭೀರವಾಗಿ ಗಾಯಗೊಂಡವರಿಗೆ ತಲಾ 10 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ ಐದು ಲಕ್ಷ ರೂಪಾಯಿ ಗಳ ಪರಿಹಾರವನ್ನು ನೀಡಲಾಗುವುದು ಎಂದೂ ಅವರು ತಿಳಿಸಿದರು.
ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಗಳ ಪರಿಹಾರ ಪಾವತಿಯನ್ನು ಖಚಿತಪಡಿಸಲು ರಾಜ್ಯ ಸರಕಾರವು ಕಂಪೆನಿಯ ಆಡಳಿತದೊಂದಿಗೆ ಮಾತುಕತೆಗಳನ್ನು ನಡೆಸಲಿದೆ. ಸರಕಾರ ಮತ್ತು ಕಂಪೆನಿಯ ವತಿಯಿಂದ ಒಂದು ಕೋಟಿ ರೂಪಾಯಿ ಪರಿಹಾರ ಪಾವತಿಗೆ ತಾನು ಆದೇಶಿಸಿದ್ದೇನೆ ಎಂದು ಅವರು ಹೇಳಿದರು.
ಅಲ್ಲದೆ, ರಾಜ್ಯ ಸರಕಾರವು ಯಾವುದೇ ತಕ್ಷಣದ ಮತ್ತು ತುರ್ತು ವೆಚ್ಚಗಳನ್ನು ಭರಿಸಲು ಮೃತರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 50,000 ರೂಪಾಯಿಗಳನ್ನು ನೀಡಲಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಮೃತಪಟ್ಟವರಲ್ಲಿ ಹೆಚ್ಚಿನವರು ಒಡಿಶಾ,ಬಿಹಾರ,ಆಂಧ್ರಪ್ರದೇಶ,ಮಧ್ಯಪ್ರದೇಶ ಮತ್ತು ತೆಲಂಗಾಣಗಳಿಗೆ ಸೇರಿದವರಾಗಿದ್ದಾರೆ.
ಸ್ಫೋಟ ಸಂಭವಿಸಿದ ಸಮಯ ಸ್ಥಾವರದಲ್ಲಿ 143 ಜನರು ಕೆಲಸ ಮಾಡುತ್ತಿದ್ದರು,ಈ ಪೈಕಿ 56 ಜನರು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ.
36 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಈಗಲೂ ಕಾಣೆಯಾಗಿದ್ದಾರೆ. ಅಧಿಕಾರಿಗಳು ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದ ರೆಡ್ಡಿ, ಗಾಯಾಳುಗಳ ವೈದ್ಯಕೀಯ ವೆಚ್ಚಗಳನ್ನು ಸರಕಾರ ಮತ್ತು ಸಿಗಾಚಿ ಭರಿಸಲಿವೆ ಎಂದು ತಿಳಿಸಿದರು. ಈ ದುರದೃಷ್ಟಕರ ಘಟನೆಗೆ ಕಾರಣರಾದವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಒತ್ತಿ ಹೇಳಿದರು.
ಬಳಿಕ ರೆಡ್ಡಿ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದರು.