×
Ad

ದೇಶದಲ್ಲಿ ಶೇ.13ರಷ್ಟು ಮಕ್ಕಳು ಅವಧಿಪೂರ್ವ ಮತ್ತು ಶೇ.17ರಷ್ಟು ಮಕ್ಕಳು ಕಡಿಮೆ ತೂಕದೊಂದಿಗೆ ಜನನ: ಆರೋಗ್ಯ ಸಮೀಕ್ಷೆ ದತ್ತಾಂಶಗಳಿಂದ ಬಹಿರಂಗ

Update: 2025-07-03 20:28 IST

ಸಾಂದರ್ಭಿಕ ಚಿತ್ರ | PC : freepik.com

ಹೊಸದಿಲ್ಲಿ: ಶೇ.13ರಷ್ಟು ಮಕ್ಕಳು ಅವಧಿಗೆ ಮುನ್ನವೇ ಜನಿಸಿದ್ದರು ಮತ್ತು ಶೇ.17ರಷ್ಟು ಮಕ್ಕಳು ಜನನದ ಸಮಯದಲ್ಲಿ ಕಡಿಮೆ ತೂಕವನ್ನು ಹೊಂದಿದ್ದರು. ಇದಕ್ಕೆ ವಾಯುಮಾಲಿನ್ಯವು ಪ್ರಮುಖ ಕಾರಣವಾಗಿದೆ ಎಂದು ಭಾರತದ ಜನಸಂಖ್ಯಾ ಆರೋಗ್ಯ ಸಮೀಕ್ಷೆ 2019-21 ಬಹಿರಂಗಗೊಳಿಸಿದೆ.

ಐಐಟಿ-ದಿಲ್ಲಿ,ಮುಂಬೈನ ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆ ಹಾಗೂ ಬ್ರಿಟನ್ ಮತ್ತು ಐರ್ಲಂಡ್‌ ನ ಸಂಸ್ಥೆಗಳ ಸಂಶೋಧಕರು ಗರ್ಭಾವಸ್ಥೆಯಲ್ಲಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಜನನ ಫಲಿತಾಂಶಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ವಿಶ್ಲೇಷಿಸಲು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಮತ್ತು ರಿಮೋಟ್ ಸೆನ್ಸಿಂಗ್ ದತ್ತಾಂಶಗಳನ್ನು ಪರಿಶೀಲನೆಗೊಳಪಡಿಸಿತ್ತು.

ಗರ್ಭಾವಸ್ಥೆಯಲ್ಲಿ ಪಿಎಮ್‌2.5 ವಾಯುಮಾಲಿನ್ಯಕ್ಕೆ ಹೆಚ್ಚು ಒಡ್ಡಿಕೊಳ್ಳುವಿಕೆಯು ಕಡಿಮೆ ತೂಕದ ಜನನಗಳ ಶೇ.40ರಷ್ಟು ಮತ್ತು ಅವಧಿಗೆ ಮುನ್ನವೇ ಜನನಗಳ ಶೇ.70ರಷ್ಟು ಸಾಧ್ಯತೆಗಳೊಂದಿಗೆ ಸಂಬಂಧವನ್ನು ಹೊಂದಿದೆ ಎನ್ನುವುದನ್ನು ಸಂಶೋಧಕರ ತಂಡವು ಕಂಡುಕೊಂಡಿದೆ.

ಮಳೆ ಮತ್ತು ತಾಪಮಾನದಂತಹ ಹವಾಮಾನ ಪರಿಸ್ಥಿತಿಗಳು ಪ್ರತಿಕೂಲ ಜನನ ಫಲಿತಾಂಶಗಳೊಂದಿಗೆ ಹೆಚ್ಚಿನ ಸಂಬಂಧ ಹೊಂದಿವೆ ಎನ್ನುವುದನ್ನು ಅಧ್ಯಯನವು ಬೆಟ್ಟು ಮಾಡಿದೆ.

ʼPLoS ಗ್ಲೋಬಲ್ ಪಬ್ಲಿಕ್ ಹೆಲ್ತ್ ಜರ್ನಲ್‌ʼನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ಭಾರತದ ಉತ್ತರದ ಜಿಲ್ಲೆಗಳಲ್ಲಿ ವಾಸಿಸುವ ಮಕ್ಕಳು ಸುತ್ತಲಿನ ವಾಯು ಮಾಲಿನ್ಯಕ್ಕೆ ಹೆಚ್ಚು ಗುರಿಯಾಗುತ್ತಿರಬಹುದು ಎಂದೂ ಹೇಳಿದೆ.

2.5 ಮೈಕ್ರೋನ್‌ಗಿಂತ ಕಡಿಮೆ ವ್ಯಾಸವನ್ನು ಹೊಂದಿರುವ ಪಿಎಂ2.5 ಕಣಗಳನ್ನು ಅತ್ಯಂತ ಹಾನಿಕಾರಕ ವಾಯು ಮಾಲಿನ್ಯಕಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದ್ದು,ಇದರ ಮೂಲಗಳಲ್ಲಿ ಪಳೆಯುಳಿಕೆ ಇಂಧನಗಳು ಮತ್ತು ಜೀವರಾಶಿಗಳ ದಹನವು ಸೇರಿದೆ.

ಉತ್ತರ ಪ್ರದೇಶ, ಬಿಹಾರ, ದಿಲ್ಲಿ, ಪಂಜಾಬ್ ಮತ್ತು ಹರ್ಯಾಣಗಳಂತಹ ಮೇಲಿನ ಗಂಗಾ ಬಯಲು ಪ್ರದೇಶದಲ್ಲಿ ಪಿಎಂ2.5 ಕಣಗಳು ಹೆಚ್ಚಿನ ಮಟ್ಟದಲ್ಲಿ ಹಾಗೂ ದೇಶದ ದಕ್ಷಿಣ ಮತ್ತು ನೈರುತ್ಯ ಪ್ರದೇಶಗಳಲ್ಲಿ ಕಡಿಮೆ ಮಟ್ಟದಲ್ಲಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಹಿಮಾಚಲ ಪ್ರದೇಶ(ಶೇ.39),ಉತ್ತರಾಖಂಡ(ಶೇ.27), ರಾಜಸ್ಥಾನ(ಶೇ.18) ಮತ್ತು ದಿಲ್ಲಿ(ಶೇ.17)ಯಂತಹ ಉತ್ತರದ ರಾಜ್ಯಗಳಲ್ಲಿ ಅವಧಿಗೆ ಮುನ್ನವೇ ಜನನದ ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ. ಮಿರೆರಮ್,ಮಣಿಪುರ ಮತ್ತು ತ್ರಿಪುರಾಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ.

ಕಡಿಮೆ ತೂಕದ ಜನನಗಳ ಅತ್ಯಂತ ಹೆಚ್ಚಿನ(ಶೇ.22) ಪ್ರಕರಣಗಳು ಪಂಜಾಬಿನಲ್ಲಿ ಕಂಡು ಬಂದಿದ್ದು,ದಿಲ್ಲಿ,ದಾದ್ರಾ ಮತ್ತು ನಗರ ಹವೇಲಿ,ಮಧ್ಯಪ್ರದೇಶ,ಹರ್ಯಾಣ ಮತ್ತು ಉತ್ತರ ಪ್ರದೇಶ ನಂತರದ ಸ್ಥಾನಗಳಲ್ಲಿವೆ. ಇದಕ್ಕೆ ಹೋಲಿಸಿದರೆ ಈಶಾನ್ಯ ಭಾರತದಲ್ಲಿ ಸ್ಥಿತಿ ಉತ್ತಮವಾಗಿದೆ ಎಂದು ಅಧ್ಯಯನ ವರದಿಯು ತಿಳಿಸಿದೆ.

ಪಿಎಂ2.5 ಒಡ್ಡಿಕೊಳ್ಳುವಿಕೆಯಲ್ಲಿ ಪ್ರತಿ ಘನ ಮೀಟರ್‌ಗೆ 10 ಮೈಕ್ರೋಗ್ರಾಮ್‌ನಷ್ಟು ಹೆಚ್ಚಳವು ಕಡಿಮೆ ತೂಕದ ಜನನಗಳಲ್ಲಿ ಶೇ.5ರಷ್ಟು ಮತ್ತು ಅವಧಿಗೆ ಮುನ್ನವೇ ಜನನಗಳಲ್ಲಿ ಶೇ.12ರಷ್ಟು ಏರಿಕೆಯೊಂದಿಗೆ ಗುರುತಿಸಿಕೊಂಡಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ಹಿಂದಿನ ಐದು ವರ್ಷಗಳಲ್ಲಿ ಶೇ.18ರಷ್ಟು ಮಕ್ಕಳು ಜನನ ಸಮಯದಲ್ಲಿ ಕಡಿಮೆ ತೂಕವನ್ನು ಹೊಂದಿದ್ದರು ಎಂದು ಹೇಳಿರುವ ಸಂಶೋಧಕರ ತಂಡವು, ವಿಶೇಷವಾಗಿ ಉತ್ತರದ ಜಿಲ್ಲೆಗಳಲ್ಲಿ ಉದ್ದೇಶಿತ ಪರಿಹಾರ ಕ್ರಮಗಳಿಗೆ ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮವನ್ನು ತೀವ್ರಗೊಳಿಸುವಂತೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News