×
Ad

ಅರುಣಾಚಲ ಪ್ರದೇಶದ ಕೆಲವು ಕ್ರೀಡಾಪಟುಗಳಿಗೆ ಸ್ಟೇಪಲ್ಡ್ ವೀಸಾ ನೀಡಿದ ಚೀನಾ: ಭಾರತದ ಖಂಡನೆ

Update: 2023-07-27 23:28 IST

ಹೊಸದಿಲ್ಲಿ: ಅರುಣಾಚಲ ಪ್ರದೇಶದ ಕೆಲವು ಕ್ರೀಡಾಪಟುಗಳಿಗೆ ಚೀನಾ ಸ್ಟೇಪಲ್ಡ್ ವೀಸಾಗಳನ್ನು ನೀಡಿರುವುದನ್ನು ಭಾರತವು ಗುರುವಾರ ಖಂಡಿಸಿದೆ. ಈ ಕ್ರಮವು ಅಸ್ವೀಕಾರಾರ್ಹವಾಗಿದೆ ಎಂದು ಬಣ್ಣಿಸಿರುವ ಅದು, ಇಂತಹ ಕ್ರಮಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ತಾನು ಕಾಯ್ದುಕೊಂಡಿದ್ದೇನೆ ಎಂದು ಪ್ರತಿಪಾದಿಸಿದೆ.

ಅರುಣಾಚಲ ಪ್ರದೇಶವು ತನಗೆ ಸೇರಿದ್ದು ಎಂದು ಚೀನಾ ಹೇಳಿಕೊಳ್ಳುತ್ತಿದೆ, ಆದರೆ ಅದು ಚೀನಾದ ಅಧೀನದಲ್ಲಿಲ್ಲ. ಹೀಗಾಗಿ ಅದು ಅಲ್ಲಿಯ ನಿವಾಸಿಗಳಿಗೆ ಪಾಸ್‌ಪೋರ್ಟ್‌ಗೆ ಲಗತ್ತಾದ ಪ್ರತ್ಯೇಕ ಕಾಗದದ ರೂಪದಲ್ಲಿ ‘ಸ್ಟೇಪಲ್ಡ್ ವೀಸಾ’ ನೀಡುತ್ತಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿಯವರು, ಚೀನಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಲಿರುವ ಕೆಲವು ಭಾರತೀಯ ಪ್ರಜೆಗಳಿಗೆ ಸ್ಟೇಪಲ್ಡ್ ವೀಸಾಗಳನ್ನು ನೀಡಿರುವುದು ಸರಕಾರದ ಗಮನಕ್ಕೆ ಬಂದಿದೆ. ಭಾರತವು ಈ ವಿಷಯದಲ್ಲಿ ಈಗಾಗಲೇ ಚೀನಾಕ್ಕೆ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮಾನ್ಯವಾದ ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಭಾರತೀಯ ಪ್ರಜೆಗಳಿಗೆ ವೀಸಾ ವ್ಯವಸ್ಥೆಯಲ್ಲಿ ವಾಸಸ್ಥಳ ಅಥವಾ ಜನಾಂಗೀಯತೆಯ ಆಧಾರದಲ್ಲಿ ಯಾವುದೇ ತಾರತಮ್ಯವಿರಕೂಡದು ಎನ್ನುವುದು ನಮ್ಮ ದೀರ್ಘಕಾಲಿಕ ಮತ್ತು ಸ್ಥಿರವಾದ ನಿಲುವು ಆಗಿದೆ ಎಂದು ಬಾಗ್ಚಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News