ರಾಹುಲ್ - ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ ಕ್ಷೇತ್ರಗಳಲ್ಲೇ ಮತ ನೋಂದಣಿಯಲ್ಲಿ ಅಕ್ರಮ: ಬಿಜೆಪಿ ಪ್ರತ್ಯಾರೋಪ
PC : PTI
ಹೊಸದಿಲ್ಲಿ: ರಾಯ್ ಬರೇಲಿ, ವಯನಾಡ್, ಡೈಮಂಡ್ ಹಾರ್ಬರ್ ಹಾಗೂ ಕನೌಜ್ ಲೋಕಸಭಾ ಕ್ಷೇತ್ರಗಳಲ್ಲಿನ ಮತದಾರರ ನೋಂದಣಿಯಲ್ಲಿ ಅಕ್ರಮವಾಗಿದ್ದು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಅಭಿಷೇಕ್ ಬ್ಯಾನರ್ಜಿ ಹಾಗೂ ಅಖಿಲೇಶ್ ಯಾದವ್ ಮತಗಳ್ಳತನದ ಮೂಲಕ ಗೆಲುವು ಸಾಧಿಸಿರುವುದರಿಂದ, ಅವರು ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಬುಧವಾರ ಬಿಜೆಪಿ ಆಗ್ರಹಿಸಿದೆ.
ವಿರೋಧ ಪಕ್ಷಗಳ ನಾಯಕರು ಪ್ರತಿನಿಧಿಸುತ್ತಿರುವ ಈ ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿಯ ವಿಶ್ಲೇಂಷಣೆಯನ್ನು ಬುಧವಾರ ಬಿಜೆಪಿಯ ಮುಖ್ಯ ಕಚೇರಿಯಲ್ಲಿ ಸ್ಲೈಡ್ ಶೋ ಪ್ರೆಸೆಂಟೇಶನ್ ಮೂಲಕ ನೀಡಿದ ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ತಮಿಳುನಾಡಿನ ಕೊಲತ್ತೂರ್ ವಿಧಾನಸಭಾ ಕ್ಷೇತ್ರ ಹಾಗೂ ಉತ್ತರ ಪ್ರದೇಶದ ಮೈನ್ ಪುರಿ ಲೋಕಸಭಾ ಕ್ಷೇತ್ರಗಳಲ್ಲಿನ ಮತದಾರರ ನೋಂದಣಿಯಲ್ಲೂ ಅಕ್ರಮಗಳು ನಡೆದಿದ್ದು, ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಎಂ.ಕೆ.ಸ್ಟಾಲಿನ್ ಹಾಗೂ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ಅವರು ಚುನಾವಣಾ ಅಕ್ರಮ ನಡೆಸಿರುವುದರಿಂದ, ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ ಹಾಗೂ ಡಿಎಂಕೆ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅನುರಾಗ್ ಠಾಕೂರ್, ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ಹಾಗೂ ಇನ್ನಿತರ ನುಸುಳುಕೋರರ ಮತ ಬ್ಯಾಂಕ್ ಅನ್ನು ರಕ್ಷಿಸಿಕೊಳ್ಳಲು ಅವರೆಲ್ಲ ಬಿಹಾರದಲ್ಲಿ ಪ್ರಗತಿಯಲ್ಲಿರುವ ಹಾಗೂ ಇತರ ರಾಜ್ಯಗಳಲ್ಲೂ ನಡೆಯಲಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ವಿರುದ್ಧ ವಿಷಪೂರಿತ ಅಭಿಯಾನ ನಡೆಸುತ್ತಿವೆ ಎಂದು ದೂರಿದರು.
“ವಿರೋಧ ಪಕ್ಷಗಳು ಮಾಡುತ್ತಿರುವ ಈ ಬೊಬ್ಬೆಯನ್ನು ನೋಡುತ್ತಿದ್ದರೆ, ಕಳ್ಳರೆ ಬೊಬ್ಬೆ ಹೊಡೆಯುತ್ತಿರುವಂತೆ ಕಂಡು ಬರುತ್ತಿದೆ” ಎಂದು ವ್ಯಂಗ್ಯವಾಡಿದ ಅವರು, ಯಾರು ತಪ್ಪು ಮಾಡಿದ್ದರೊ, ಅವರೇ ಇದೀಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
“ರಾಯ್ ಬರೇಲಿ, ವಯನಾಡ್, ಕನೌಜ್ ನಿಂದ ಡೈಮಂಡ್ ಹಾರ್ಬರ್ ವರೆಗೂ ಅವರೇಕೆ ನಕಲಿ ಮತದಾರರನ್ನು ಸೃಷ್ಟಿಸಿದರು ಎಂಬ ಒಂದೇ ಪ್ರಶ್ನೆ ಕೇಳಿ ಬರುತ್ತಿದೆ. ಮತಗಳ್ಳತನದಲ್ಲಿ ಭಾಗಿಯಾಗಿದ್ದಕ್ಕೆ ಹಾಗೂ ನುಸುಳುಕೋರರನ್ನು ರಕ್ಷಿಸುತ್ತಿರುವುದಕ್ಕೆ ಅವರು ರಾಜೀನಾಮೆ ಸಲ್ಲಿಸುತ್ತಾರೆಯೆ?” ಎಂದು ಅವರು ಸವಾಲು ಹಾಕಿದ್ದಾರೆ.
ಇದಕ್ಕೂ ಮುನ್ನ, ಗುರುವಾರ ಪತ್ರಿಕಾ ಗೋಷ್ಠಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕದ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆಯೆನ್ನಲಾದ ಮತಗಳ್ಳತನದ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಶನ್ ನೀಡಿದ್ದರು. ಈ ಆರೋಪವು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟದ ನಡುವೆ ಪರಸ್ಪರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.