ತಂತ್ರಜ್ಞಾನವು ಮಾನವ ತೀರ್ಪನ್ನು ವರ್ಧಿಸಬೇಕು, ಅದನ್ನು ಬದಲಿಸಬಾರದು: ಸಿಜೆಐ ಸೂರ್ಯಕಾಂತ್
ಸಿಜೆಐ ಸೂರ್ಯಕಾಂತ | Photo Credit : PTI
ಕಟಕ್ (ಒಡಿಶಾ),ಡಿ.14: ತಂತ್ರಜ್ಞಾನವು ಮಾನವ ತೀರ್ಪನ್ನು ಇನ್ನಷ್ಟು ಬಲಗೊಳಿಸಬೇಕೇ ಹೊರತು ಅದನ್ನು ಬದಲಿಸಬಾರದು ಎಂದು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಸೂರ್ಯಕಾಂತ ಅವರು ರವಿವಾರ ಇಲ್ಲಿ ಹೇಳಿದರು.
‘ಸಾಮಾನ್ಯ ಜನರಿಗೆ ನ್ಯಾಯವನ್ನು ಖಚಿತಪಡಿಸುವುದು: ಮೊಕದ್ದಮೆ ವೆಚ್ಚಗಳು ಮತ್ತು ವಿಳಂಬಗಳನ್ನು ತಗ್ಗಿಸಲು ಕಾರ್ಯತಂತ್ರಗಳು’ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಿಜೆಐ, ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳು ವಿಚಾರಣಾ ನ್ಯಾಯಾಲಯದಿಂದ ಸಾಂವಿಧಾನಿಕ ನ್ಯಾಯಾಲಯದವರೆಗೆ ನ್ಯಾಯಾಂಗ ವ್ಯವಸ್ಥೆಯ ಪ್ರತಿಯೊಂದೂ ಹಂತದಲ್ಲಿಯೂ ಅಡ್ಡಿಯನ್ನುಂಟು ಮಾಡುತ್ತವೆ. ಮೇಲ್‌ಸ್ತರದಲ್ಲಿ ಅಡಚಣೆ ಉಂಟಾದಾಗ ಕೆಳಸ್ತರದಲ್ಲಿ ಒತ್ತಡವು ತೀವ್ರಗೊಳ್ಳುತ್ತದೆ ಎಂದು ಹೇಳಿದರು.
ಬಾಕಿ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ನ್ಯಾಯಾಂಗ ಮೂಲಸೌಕರ್ಯವನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು,ಏಕೆಂದರೆ ಸಾಕಷ್ಟು ನ್ಯಾಯಾಲಯಗಳಿಲ್ಲದೆ ಅತ್ಯಂತ ಪ್ರಾಮಾಣಿಕ ನ್ಯಾಯಾಂಗ ವ್ಯವಸ್ಥೆಯೂ ಲಾಜಿಸ್ಟಿಕ್ ವ್ಯವಸ್ಥೆಯ ಮೇಲಿನ ಒತ್ತಡದಡಿ ಕುಸಿಯುತ್ತದೆ ಎಂದರು.
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ತಂತ್ರಜ್ಞಾನವು ತುಂಬ ಉಪಯುಕ್ತವಾಗಿತ್ತು ಎಂದು ಅವರು ಹೇಳಿದ ಅವರು,‘ಆದರೂ ತಂತ್ರಜ್ಞಾನವು ತನ್ನದೇ ಆದ ನೆರಳುಗಳನ್ನು ಹೊಂದಿದೆ ಎನ್ನುವುದನ್ನು ಮರೆಯಬಾರದು. ಡೀಪ್ ಫೇಕ್ ಗಳು ಮತ್ತು ಡಿಜಿಟಲ್ ಬಂಧನಗಳ ಯುಗದಲ್ಲಿ ನ್ಯಾಯಾಲಯಗಳು ವಾಸ್ತವವನ್ನು ಪರಿಗಣಿಸದ ಆಶಾವಾದವನ್ನು ಹೊಂದಿರಲು ಸಾಧ್ಯವಿಲ್ಲ. ಬಡವರು,ವೃದ್ಧರು ಮತ್ತು ಡಿಜಿಟಲ್ ಮಾಹಿತಿ ಇಲ್ಲದವರನ್ನು ಹೊರಗಿರಿಸುವ ಸುಧಾರಣೆಯು ಸುಧಾರಣೆಯೇ ಅಲ್ಲ,ಅದು ಹಿಮ್ಮೆಟ್ಟುವಿಕೆಯಾಗಿದೆ. ಇದೇ ಕಾರಣಕ್ಕಾಗಿ ತಂತ್ರಜ್ಞಾನವು ನ್ಯಾಯದ ಸೇವಕನಾಗಿ ಉಳಿಯಬೇಕು,ಅದರ ಬದಲಿಯಾಗಿ ಅಲ್ಲ ಎಂದು ನಾನು ಯಾವಾಗಲೂ ಪ್ರತಿಪಾದಿಸಿದ್ದೇನೆ. ಅದು ಮಾನವ ತೀರ್ಪನ್ನು ವರ್ಧಿಸಬೇಕೇ ಹೊರತು ಅದನ್ನು ಬದಲಿಸಬಾರದು’ ಎಂದು ಹೇಳಿದರು.