Maharashtra | ಭಿವಂಡಿಯಲ್ಲಿ ಬಿಜೆಪಿ- ಕೆವಿಎ ಕಾರ್ಯಕರ್ತರ ನಡುವೆ ಘರ್ಷಣೆ
PC | PTI
ಭಿವಂಡಿ (ಥಾಣೆ ಜಿಲ್ಲೆ): ಪವರ್ ಲೂಮ್ ಗಳಿಗೆ ಹೆಸರುವಾಸಿಯಾದ ಹಾಗೂ ದೇಶದ ಪ್ರಮುಖ ಗೋದಾಮು–ಲಾಜಿಸ್ಟಿಕ್ಸ್ ಕೇಂದ್ರಗಳಲ್ಲೊಂದಾದ ಭಿವಂಡಿ ಪಟ್ಟಣದಲ್ಲಿ ಬಿಜೆಪಿ ಮತ್ತು ಕೊನಾರ್ಕ್ ವಿಕಾಸ್ ಅಘಾಡಿ (ಕೆವಿಎ) ಕಾರ್ಯಕರ್ತರ ನಡುವೆ ರವಿವಾರ ಸಂಜೆ ಘರ್ಷಣೆ ನಡೆದಿದ್ದು, ಕೆಲಕಾಲ ಉದ್ವಿಗ್ನತೆ ಉಂಟಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಗುಂಪುಗಳನ್ನು ಚದುರಿಸಿದ್ದು, ಪರಿಸ್ಥಿತಿ ಇದೀಗ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ನಾಯಕರ ಬೆಂಬಲಿಗರ ನಡುವೆ ಗಲಾಟೆ ಸಂಭವಿಸಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ ಶಾಂತಿ ಸ್ಥಾಪನೆಯಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ವಲಯ–II) ಶಶಿಕಾಂತ್ ಬೊರಾಟೆ ಸೋಮವಾರ ತಿಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾದ ಕೆಲವರನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.
23 ವಾರ್ಡ್‌ಗಳು ಮತ್ತು 90 ಸ್ಥಾನಗಳನ್ನು ಹೊಂದಿರುವ ಭಿವಂಡಿ–ನಿಝಾಂಪುರ ಮಹಾನಗರ ಪಾಲಿಕೆ (ಬಿಎನ್‌ಎಂಸಿ)ಗೆ ಹೊಸ ಆಡಳಿತ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಚುನಾವಣಾ ಫಲಿತಾಂಶಗಳಂತೆ ಕಾಂಗ್ರೆಸ್ 30 ಸ್ಥಾನಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದರೆ. ಬಿಜೆಪಿ 20, ಶಿವಸೇನೆ 12, ಎನ್‌ಸಿಪಿ (ಎಸ್‌ಪಿ) 12, ಸಮಾಜವಾದಿ ಪಕ್ಷ 6, ಕೊನಾರ್ಕ್ ವಿಕಾಸ್ ಅಘಾಡಿ 4, ಭಿವಂಡಿ ವಿಕಾಸ್ ಅಘಾಡಿ 3 ಹಾಗೂ ಸ್ವತಂತ್ರ ಅಭ್ಯರ್ಥಿ 1 ಸ್ಥಾನಗಳನ್ನು ಗೆದ್ದಿದ್ದಾರೆ.
ಭಿವಂಡಿ ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್‌ನಲ್ಲಿ ಘರ್ಷಣೆ ತೀವ್ರಗೊಂಡಿತು. ರವಿವಾರ ಸಂಜೆ ಮಾಜಿ ಮೇಯರ್ ಹಾಗೂ ಕಾರ್ಪೊರೇಟರ್ ಆಗಿ ಆಯ್ಕೆಯಾದ ಕೆವಿಎ ನಾಯಕ ವಿಲಾಸ್ ಪಾಟೀಲ್ ಅವರ ಬಂಗಲೆಯ ಮೇಲೆ ದಾಳಿ ನಡೆದ ಬಳಿಕ ಉದ್ವಿಗ್ನತೆ ಆರಂಭವಾಯಿತು.
ಈ ದಾಳಿಗೆ ಭಿವಂಡಿ ಪಶ್ಚಿಮದ ಬಿಜೆಪಿ ಶಾಸಕ ಮಹೇಶ್ ಚೌಗುಲೆ ಅವರ ಪುತ್ರ ಮೀಟ್ ಚೌಗುಲೆ ಕಾರಣರಾಗಿದ್ದಾರೆ ಎಂದು ಪಾಟೀಲ್ ಆರೋಪಿಸಿದ್ದಾರೆ. “ನನ್ನ ಮನೆಯ ಮೇಲೆ ದಾಳಿ ನಡೆದಿದೆ. ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದರು. ಈ ವಿಚಾರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗಮನ ಹರಿಸಬೇಕು,” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಚೌಗುಲೆ, ಚುನಾವಣೆ ಬಳಿಕವೂ ತಮ್ಮ ಬೆಂಬಲಿಗರು ಹಾಗೂ ಕಚೇರಿಯ ಮೇಲೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.