×
Ad

ಬಿಹಾರ ವಿಧಾನಸಭಾ ಚುನಾವಣೆ | ನವಾಡ ಮತಗಟ್ಟೆ ಬಳಿ ವಿವಿಧ ಪಕ್ಷಗಳ ಬೆಂಬಲಿಗರ ನಡುವೆ ಘರ್ಷಣೆ

Update: 2025-11-11 11:39 IST

ಎರಡನೇ ಹಂತದ ಮತದಾನ (Photo: PTI)

ನವಾಡ (ಬಿಹಾರ): ಮಂಗಳವಾರ ಪ್ರಾರಂಭಗೊಂಡಿರುವ ಬಿಹಾರ ವಿಧಾನಸಭಾ ಚುನಾವಣೆಯ ಎರಡನೆ ಮತ್ತು ಅಂತಿಮ ಹಂತದ ಮತದಾನದ ವೇಳೆ ನವಾಡ ಜಿಲ್ಲೆಯ ವಾರಿಸಾಲಿಗಂಜ್ ಪ್ರದೇಶದಲ್ಲಿ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ಸಣ್ಣ ಪ್ರಮಾಣದ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ನವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಧೀಮನ್, “ಮತಗಟ್ಟೆಯಿಂದ ಸುಮಾರು 1.5 ಕಿಮೀ ದೂರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ಸಣ್ಣ ಪ್ರಮಾಣದ ಘರ್ಷಣೆ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ, ಘಟನೆಯ ಕುರಿತು ಪರಿಶೀಲನೆ ನಡೆಸಿದ್ದಾರೆ. ಆ ಪ್ರದೇಶವು ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು, ಮತದಾನ ಸುಗಮವಾಗಿ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.

ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ವಾಹನವೊಂದು ಹಾನಿಗೀಡಾಗಿದೆ ಎಂಬ ವದಂತಿಗಳನ್ನು ಅಲ್ಲಗಳೆದಿರುವ ಅವರು, ಈ ವದಂತಿಗಳು ಸಂಪೂರ್ಣ ನಿರಾಧಾರವಾಗಿದ್ದು, ಈ ಘಟನೆಯಲ್ಲಿ ಖಾಸಗಿ ವಾಹನವೊಂದು ಹಾನಿಗೀಡಾಗಿದೆ. ಈ ವಾಹನಕ್ಕೂ ಚುನಾವಣಾ ಕರ್ತವ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘರ್ಷಣೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಿರ್ದಿಷ್ಟ ಪಕ್ಷವೊಂದಕ್ಕೆ ಮತ ಚಲಾಯಿಸಲಿಲ್ಲವೆಂದು ವಿರೋಧಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಓರ್ವ ವ್ಯಕ್ತಿ ಆರೋಪಿಸುತ್ತಿರುವುದನ್ನು ಅದರಲ್ಲಿ ಕಾಣಬಹುದಾಗಿದೆ. ಆದರೆ, ಈ ವಿಡಿಯೊದ ನೈಜತೆಯಿನ್ನೂ ದೃಢಪಟ್ಟಿಲ್ಲ.

ಈ ನಡುವೆ, ಬಿಹಾರದ ಬಾಕಿ 122 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಎರಡನೆ ಹಂತದ ಚುನಾವಣೆಯಲ್ಲಿ ಸಾಧಾರಣ ಪ್ರಮಾಣದ ಮತದಾನ ಪ್ರಗತಿಯಲ್ಲಿದ್ದು, ಬೆಳಗ್ಗೆ 9 ಗಂಟೆಯವರೆಗೆ 3.7 ಕೋಟಿ ಮತದಾರರ ಪೈಕಿ ಶೇ. 14.55ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಹಂತದಲ್ಲಿ ಒಟ್ಟು 1,302 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News