ವೈದ್ಯೆಯ ಹಿಜಾಬ್ ಎಳೆದ ಪ್ರಕರಣ | CM ನಿತೀಶ್ ಕುಮಾರ್, ಹೇಳಿಕೆ ನೀಡಿದ UP ಸಚಿವ ಸಂಜಯ್ ನಿಶದ್ ವಿರುದ್ಧ ದೂರು
Photo Credit : Screengrab : X
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಸಂಜಯ್ ನಿಶದ್ ವಿರುದ್ಧ ಸಮಾಜವಾದಿ ಪಕ್ಷದ ನಾಯಕಿ ಸುಮಯ್ಯಾ ರಾಣಾ ಅವರು ಲಕ್ನೋದ ಕೈಸರ್‌ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈದ್ಯೆಯ ಹಿಜಾಬ್ ಎಳೆದ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಪಾಟ್ನಾ ದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನೂತನವಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ರಮದ ವೇಳೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಸ್ಲಿಂ ಮಹಿಳೆಯ ಹಿಜಾಬ್ ಅನ್ನು ಹಿಡಿದು ಎಳೆಯುತ್ತಿರುವಂತೆ ಕಾಣಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಆಕ್ರೋಶ ವ್ಯಕ್ತವಾಗಿದೆ.
ಈ ವಿವಾದದ ನಡುವೆ ಉತ್ತರ ಪ್ರದೇಶದ ಸಚಿವ ಸಂಜಯ್ ನಿಶದ್ ನೀಡಿದ ಹೇಳಿಕೆಗಳೂ ಟೀಕೆಗೆ ಗುರಿಯಾಗಿವೆ. ಹಿಜಾಬ್ ವಿಚಾರವಾಗಿ ಅವರು ಮಾಡಿದ ಟಿಪ್ಪಣಿಗಳು ಮಹಿಳೆಯ ಗೌರವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತವೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಬಳಿಕ ಪ್ರತಿಕ್ರಿಯಿಸಿದ ಸುಮಯ್ಯಾ ರಾಣಾ, ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಇಂತಹ ವರ್ತನೆ ನಡೆಯುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ಕೃತ್ಯಗಳು ಸಮಾಜದಲ್ಲಿ ತಪ್ಪಾದ ಸಂದೇಶವನ್ನು ನೀಡುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ.
ರಾಣಾ ಅವರ ಪರ ವಕೀಲ ಮಿಶಮ್ ಝೈದಿ, ಮಹಿಳೆಯ ಗೌರವಕ್ಕೆ ಧಕ್ಕೆ ತರುವಂತಹ ನಡೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಸಚಿವ ಸಂಜಯ್ ನಿಶದ್ ನೀಡಿರುವ ಹೇಳಿಕೆಗಳು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸ್ವಭಾವದ್ದಾಗಿದ್ದು, ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.