×
Ad

ಕೊಚ್ಚಿನ್: ಮೂರು ಜಲಾಂತರ್ಗಾಮಿ ನಿರೋಧಕ ಯುದ್ಧನೌಕೆಗಳಿಗೆ ಚಾಲನೆ

Update: 2023-11-30 22:47 IST

Photo: @GreatKerala1 |X

ಕೊಚ್ಚಿನ್(ಕೇರಳ): ಭಾರತೀಯ ನೌಕಾಪಡೆಗಾಗಿ ಕೊಚ್ಚಿನ್ ಶಿಪ್‌ಯಾರ್ಡ್ ನಿರ್ಮಿಸುತ್ತಿರುವ ಎಂಟು ಜಲಾಂತರ್ಗಾಮಿ ನಿರೋಧಕ ಯುದ್ಧನೌಕೆ (ASW)ಗಳ ಸರಣಿಯಲ್ಲಿ ಮೊದಲ ಮೂರು ನೌಕೆಗಳಿಗೆ ಗುರುವಾರ ಶಿಪ್‌ಯಾರ್ಡ್‌ನ ಆವರಣದಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಯಿತು.

ನೌಕಾಪಡೆಗೆ ಸೇರ್ಪಡೆಗೊಂಡ ಬಳಿಕ ಐಎನ್‌ಎಸ್ ಮಾಹೆ, ಐಎನ್‌ಎಸ್ ಮಾಲವಣ ಮತ್ತು ಐಎನ್‌ಎಸ್ ಮಂಗ್ರೋಲ್ ಎಂದು ನಾಮಕರಣಗೊಳ್ಳಲಿರುವ ಈ ನೌಕೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ನೌಕಾಪಡೆಯ ಉಪ ಮುಖ್ಯಸ್ಥ ವೈಸ್ ಅಡ್ಮಿರಲ್ ಸಂಜಯ ಜೆ.ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊಚ್ಚಿನ್ ಶಿಪ್‌ಯಾರ್ಡ್ ಎಂಟು ಎಎಸ್‌ಡಬ್ಲ್ಯುಗಳ ನಿರ್ಮಾಣಕ್ಕಾಗಿ 2019ರಲ್ಲಿ ರಕ್ಷಣಾ ಸಚಿವಾಲಯದೊಂದಿಗೆ ಒಪ್ಪಂದಕ್ಕೆ ಅಂಕಿತ ಹಾಕಿತ್ತು. ಈ ಮಾಹೆ ವರ್ಗದ ಹಡಗುಗಳು ಹಾಲಿ ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭಯ ವರ್ಗದ ನೌಕೆಗಳ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲಿವೆ. ಈ ಹಡಗುಗಳನ್ನು ಸಾಗರದಲ್ಲಿ ಜಲಾಂತರ್ಗಾಮಿ ನಿರೋಧಕ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಮೈನ್‌ಗಳ ಅಳವಡಿಕೆ ಇತ್ಯಾದಿಗಳಿಗೂ ಬಳಕೆಯಾಗಲಿವೆ.

ಈ ನೌಕೆಗಳು ಲಘು ಟಾರ್ಪೆಡೊಗಳು, ಎಎಸ್‌ಡಬ್ಲ್ಯು ರಾಕೆಟ್‌ಗಳು ಮತ್ತು ಮೈನ್‌ಗಳು 30 ಮಿಮೀ ಗನ್‌ನಂತಹ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಿತವಾಗಿವೆ.

ಪ್ರತಿ ಹಡಗು 78 ಮೀ.ಉದ್ದ,11.36 ಮೀ.ಅಗಲವಿದ್ದು 25 ನಾಟ್‌ಗಳವರೆಗೆ ವೇಗದಲ್ಲಿ ಚಲಿಸುತ್ತವೆ. ಪ್ರತಿ ನೌಕೆಯು 57 ಸಿಬ್ಬಂದಿಗಳನ್ನು ಹೊಂದಿರಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News