ಮಧ್ಯಪ್ರದೇಶ | ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟ ಪ್ರಕರಣ : ಆರೋಪಿ ವೈದ್ಯನ ಪತ್ನಿಯ ಬಂಧನ
ಸಾಂದರ್ಭಿಕ ಚಿತ್ರ
ಛಿಂದ್ವಾರ, ನ. 4: ಕೆಮ್ಮು ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟಿರುವ ದುರಂತದ ಬಗ್ಗೆ ತನಿಖೆ ನಡೆಸುತ್ತಿರುವ ಮಧ್ಯಪ್ರದೇಶದ ವಿಶೇಷ ತನಿಖಾ ತಂಡ(ಸಿಟ್)ವು ಆರೋಪಿಗಳ ಪೈಕಿ ಒಬ್ಬನಾಗಿರುವ ಡಾ.ಪ್ರವೀಣ್ ಸೋನಿಯ ಪತ್ನಿಯನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಕೆಮ್ಮು ಸಿರಪ್ ಸೇವಿಸಿ 24 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.
ಛಿಂದ್ವಾರದಲ್ಲಿ ಕೆಲಸ ಮಾಡುತ್ತಿರುವ ಡಾ.ಸೋನಿ ವಿಷಯುಕ್ತ ಕೆಮ್ಮು ಸಿರಪ್ ಕೋಲ್ಡ್ರಿಫ್‌ನ್ನು ಹಲವಾರು ಮಕ್ಕಳಿಗೆ ನೀಡಿದ್ದರು. ಆ ಮಕ್ಕಳು ಬಳಿಕ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದಾರೆ. ನಿರ್ಲಕ್ಷ್ಯಕ್ಕಾಗಿ ಕಳೆದ ತಿಂಗಳು ಈ ವೈದ್ಯನನ್ನು ಬಂಧಿಸಲಾಗಿತ್ತು.
ಅವನ ಪತ್ನಿ ಹಾಗೂ ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾಗಿರುವ ಜ್ಯೋತಿ ಸೋನಿಯನ್ನು ಸೋಮವಾರ ರಾತ್ರಿ ಛಿಂದ್ವಾರ ಜಿಲ್ಲೆಯ ಪರೇಸಿಯ ಪಟ್ಟಣದಲ್ಲಿರುವ ಆಕೆಯ ನಿವಾಸದಿಂದ ಬಂಧಿಸಲಾಗಿದೆ ಎಂದು ಸಿಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಮಹಿಳೆಯು, ಕೋಲ್ಡ್ರಿಫ್ ಕೆಮ್ಮು ಸಿರಪ್ ಮಾರಾಟ ಮಾಡಿದ ಔಷಧ ಅಂಗಡಿಯ ಮಾಲೀಕಳಾಗಿದ್ದಳು.
ಈ ದುರಂತಕ್ಕೆ ಸಂಬಂಧಿಸಿ ಈವರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ.