ತೆಲಂಗಾಣ | ಅಕ್ರಮ ಬಾಡಿಗೆ ತಾಯ್ತನ ಹಾಗೂ ಮಾನವ ಅಂಡಾಣುಗಳ ವ್ಯಾಪಾರ ಜಾಲ ಬಯಲಿಗೆ
ಹೈದರಾಬಾದ್: ಸೃಷ್ಟಿ ಐವಿಎಫ್ ಕ್ಲಿನಿಕ್ ಪ್ರಕರಣದಲ್ಲಿ ಐವಿಎಫ್ ಚಿಕಿತ್ಸೆಯ ಸೋಗಿನಲ್ಲಿ ಮಗುವೊಂದನ್ನು ಮಾರಾಟ ಮಾಡುತ್ತಿದ್ದುದನ್ನು ಬಯಲುಗೊಳಿಸಿದಂತೆಯೇ, ಶುಕ್ರವಾರ ಸೈಬರಾಬಾದ್ ಠಾಣೆ ಪೊಲೀಸರು ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ಬಾಡಿಗೆ ತಾಯ್ತನ ಹಾಗೂ ಅಕ್ರಮ ಮಾನವ ಅಂಡಾಣುಗಳ ವ್ಯಾಪಾರವನ್ನು ಭೇದಿಸಿದ್ದಾರೆ.
ಹಲವಾರು ಐವಿಎಫ್ ಕೇಂದ್ರಗಳೊಂದಿಗೆ ಕೈಜೋಡಿಸಿ ಏಳು ಮಂದಿ ಮಹಿಳೆಯರು ಹಾಗೂ ಓರ್ವ ಪುರುಷ ಈ ಜಾಲದ ಕಾರ್ಯಾಚರಣೆ ನಡೆಸುತ್ತಿದ್ದರು ಎನ್ನಲಾಗಿದೆ.
ಮಕ್ಕಳಿಲ್ಲದ ದಂಪತಿಗಳ ಹತಾಶೆಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಈ ಆರೋಪಿಗಳು, ಅದನ್ನು ತಮ್ಮ ಹಣಕಾಸು ಲಾಭಕ್ಕೆ ಬಳಸಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಮುಖ ಆರೋಪಿ ನರ್ರೇದುಲ್ಲಾ ಲಕ್ಷ್ಮಿ ರೆಡ್ಡಿ ಈ ಮುನ್ನ ಅಂಡಾಣು ದಾನಿ ಹಾಗೂ ಬಾಡಿಗೆ ತಾಯಿಯಾಗಿ ಕೆಲಸ ನಿರ್ವಹಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಇತರ ಏಜೆಂಟ್ ಗಳು, ಫಲವಂತಿಕೆ ಕ್ಲಿನಿಕ್ ಗಳು ಹಾಗೂ ಕೇಂದ್ರಗಳೊಂದಿಗಿನ ತನ್ನ ಸಂಪರ್ಕ ಜಾಲ ಹಾಗೂ ತನ್ನ ಅನುಭವವನ್ನು ಬಳಸಿಕೊಂಡು ಆಕೆ ಇತರ ಮಹಿಳೆಯರನ್ನು ಅಂಡಾಣು ದಾನಿಗಳು ಅಥವಾ ಬಾಡಿಗೆ ತಾಯಿಯರಾಗಿ ಕಾರ್ಯನಿರ್ವಹಿಸಲು ನೇಮಿಸಿಕೊಳ್ಳುತ್ತಿದ್ದಳು ಹಾಗೂ ಅವರನ್ನು ಐವಿಎಫ್ ಕೇಂದ್ರಗಳಿಗೆ ಶಿಫಾರಸು ಮಾಡುತ್ತಿದ್ದರು ಎನ್ನಲಾಗಿದೆ. ಪ್ರತಿಯೊಂದು ಯಶಸ್ವಿ ವಿಧಾನಕ್ಕೆ ಆಕೆ ಗಮನಾರ್ಹ ಪ್ರಮಾಣದ ಹಣವನ್ನು ಸ್ವೀಕರಿಸುತ್ತಿದ್ದರು ಎಂದು ಹೇಳಲಾಗಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ನರ್ರೇದುಲ್ಲಾ ಲಕ್ಷ್ಮಿ ರೆಡ್ಡಿ, ಅವರಿಗೆ ತಮ್ಮ ಅಂಡಾಣು ದಾನ ಮಾಡುವಂತೆ, ಇಲ್ಲವೆ ಬಾಡಿಗೆ ತಾಯಿಯಾಗುವಂತೆ ಒತ್ತಡ ಹೇರುತ್ತಿದ್ದಳು ಹಾಗೂ ಆಸ್ಪತ್ರೆಗಳಿಂದ ಹೆಚ್ಚುವರಿ ನಿರ್ವಹಣಾ ವೆಚ್ಚವನ್ನು ವಸೂಲಿ ಮಾಡಿಕೊಂಡು, ಅವರನ್ನು ತನ್ನ ನಿವಾಸದಲ್ಲಿ ಇರಿಸಿಕೊಳ್ಳುತ್ತಿದ್ದಳು ಎಂದು ಆರೋಪಿಸಲಾಗಿದೆ.
ಈ ಕುರಿತು ವಿಶ್ವಾಸಾರ್ಹ ಮಾಹಿತಿ ಸ್ವೀಕರಿಸಿದ ನಂತರ, ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಉಪಸ್ಥಿತಿಯಲ್ಲಿ ವಿಶೇಷ ಪೊಲೀಸ್ ತಂಡವೊಂದು ಲಕ್ಷ್ಮಿಯ ನಿವಾಸದ ಮೇಲೆ ದಾಳಿ ನಡೆಸಿದೆ. ಈ ಕಾರ್ಯಾಚರಣೆಯ ವೇಳೆ, ಅಕ್ರಮ ಬಾಡಿಗೆ ತಾಯ್ತನ ಹಾಗೂ ಮಾನವ ಅಂಡಾಣುಗಳ ವ್ಯಾಪಾರದಲ್ಲಿ ತೊಡಗಿದ್ದವರನ್ನು ಬಂಧಿಸಲಾಗಿದೆ.
ಈ ಸಂಬಂಧ, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು, ಬಾಡಿಗೆ ತಾಯ್ತನ ನಿರ್ಬಂಧ ಕಾಯ್ದೆಯ ವಿವಿಧ ಸೆಕ್ಷನ್ ಗಳು ಹಾಗೂ ಸಂತಾನೋತ್ಪತ್ತಿ ತಂತ್ರಜ್ಞಾನ ನೆರವು ಕಾಯ್ದೆಯ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಸ್ತೃತ ತನಿಖೆಗೆ ಚಾಲನೆ ನೀಡಲಾಗಿದೆ.