ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ನಿಯಂತ್ರಣ ತಪ್ಪುವ ಸಾಧ್ಯತೆ: ವಿಶ್ವಸಂಸ್ಥೆಯ ಮುಖ್ಯಸ್ಥ ಗುಟೆರಸ್ ಎಚ್ಚರಿಕೆ
PC: PTI
ನ್ಯೂಯಾರ್ಕ್: ಇರಾನ್ ಮೇಲಿನ ಅಮೆರಿಕದ ದಾಳಿಯು ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ಅಪಾಯಕಾರಿ ಉಲ್ಬಣ. ಹೀಗೆ ಮುಂದುವರಿದರೆ ಸಂಘರ್ಷವು ನಿಯಂತ್ರಣ ತಪ್ಪಬಹುದು ಎಂದು ವಿಶ್ವ ಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಮೇಲೆ ಅಮೆರಿಕ ನಡೆಸಿದ ವಾಯು ದಾಳಿಯನ್ನು ಖಂಡಿಸಿರುವ ಅವರು,"ಇಂದು ಇರಾನ್ ಮೇಲೆ ಅಮೆರಿಕವು ವಾಯುದಾಳಿಯ ಮೂಲಕ ನಡೆಸಿದ ಬಲಪ್ರಯೋಗದಿಂದ ನಾನು ತೀವ್ರವಾಗಿ ಗಾಬರಿಗೊಂಡಿದ್ದೇನೆ. ಈಗಾಗಲೇ ಅಪಾಯದ ಅಂಚಿನಲ್ಲಿರುವ ಪ್ರದೇಶಕ್ಕೆ ಸಾಕಷ್ಟು ಹೊಡೆತ ನೀಡಲಿದೆ. ಈ ಬೆಳವಣಿಗೆಯು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯಾಗಿದೆ" ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ಈ ಸಂಘರ್ಷವು ತ್ವರಿತವಾಗಿ ನಿಯಂತ್ರಣ ತಪ್ಪುವ ಅಪಾಯ ಹೆಚ್ಚುತ್ತಿದೆ. ಸಾಮಾನ್ಯ ಜನರಿಗೆ ಮತ್ತು ಆ ಪ್ರದೇಶಕ್ಕೆ, ಅದರೊಂದಿಗೆ ಜಗತ್ತಿನ ಮೇಲೆ ತೀವ್ರ ಪರಿಣಾಮಗಳನ್ನು ಬೀರಲಿದೆ. ಸದಸ್ಯ ರಾಷ್ಟ್ರಗಳು ಸಂಘರ್ಷದ ಉಲ್ಬಣವನ್ನು ಕಡಿಮೆ ಮಾಡಲು ಮತ್ತು ವಿಶ್ವಸಂಸ್ಥೆಯ ಧ್ಯೇಯ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಇತರ ನಿಯಮಗಳ ಅಡಿಯಲ್ಲಿ ತಮ್ಮ ಬಾಧ್ಯತೆಗಳನ್ನು ಎತ್ತಿಹಿಡಿಯಲು ನಾನು ಕರೆ ನೀಡುತ್ತೇನೆ. ಮುಂದಿನ ಏಕೈಕ ಮಾರ್ಗ ರಾಜತಾಂತ್ರಿಕತೆ. ಅದೊಂದೇ ಏಕೈಕ ಭರವಸೆ. ಮಿಲಿಟರಿ ದಾಳಿಯು ಪರಿಹಾರವಲ್ಲ" ಎಂದು ಅವರು ಕರೆ ನೀಡಿದ್ದಾರೆ.