ತೆರಿಗೆ ಆಶ್ರಯ ಪಡೆದ ದೇಶಗಳ 'ಮೌನ'ದಿಂದಾಗಿ ಅದಾನಿ ವಿರುದ್ಧದ ಸೆಬಿ ತನಿಖೆ ಸ್ಥಗಿತ: ಕಾಂಗ್ರೆಸ್ ಆರೋಪ
Photo credit: PTI
ಹೊಸದಿಲ್ಲಿ: ಅದಾನಿ ಹಗರಣದ ಪ್ರಮುಖ ವ್ಯಕ್ತಿಗೆ ಸೈಪ್ರಸ್ ಪೌರತ್ವವಿದೆ. ತೆರಿಗೆ ಆಶ್ರಯ ಪಡೆದ ದೇಶಗಳು ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳದಿರುವುದು ಮತ್ತು ಭಾರತದ ಒತ್ತಡದ ಕೊರತೆಯಿಂದಾಗಿ ಅದಾನಿ ಸಮೂಹ ಸಂಸ್ಥೆಯನ್ನು ಒಳಗೊಂಡ ವಹಿವಾಟುಗಳ ಕುರಿತು ನಡೆಯುತ್ತಿರುವ ಸೆಬಿ ತನಿಖೆಗಳಿಗೆ ಅಡ್ಡಿಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೈಪ್ರಸ್‌ಗೆ ಭೇಟಿ ನೀಡುತ್ತಿರುವ ಮಧ್ಯೆ ವಿರೋಧ ಪಕ್ಷದ ಹೇಳಿಕೆಗಳು ಹೊರ ಬಿದ್ದಿದೆ.
"ಪ್ರಧಾನಿ ಕೆನಡಾಕ್ಕೆ ಹೋಗುವ ದಾರಿಯಲ್ಲಿ ಸೈಪ್ರಸ್‌ನಲ್ಲಿದ್ದಾರೆ. ಮೋದಾನಿ ಹಗರಣದ ಪ್ರಮುಖ ವ್ಯಕ್ತಿಗೆ ಸೈಪ್ರಸ್ ಪೌರತ್ವ ಇರುವುದು ಶುದ್ಧ ಕಾಕತಾಳೀಯ ಎಂದು ಅವರು ನಮ್ಮನ್ನು ನಂಬಿಸುತ್ತಾರೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.
ಸೈಪ್ರಸ್ ಮೂಲದ ನ್ಯೂ ಲೀನಾದಿಂದ, ಅದಾನಿ ಕಂಪೆನಿಗಳಲ್ಲಿ ಸುಮಾರು 420 ಮಿಲಿಯನ್ ಡಾಲರ್ ಹೂಡಿಕೆ ಹೊಂದಿದೆ ಎಂದು ವರದಿಯಾಗಿದೆ ಎಂದು ಅವರು ಹೇಳಿದ್ದಾರೆ.
"ಈ ಹೂಡಿಕೆದಾರರು ಅಮಿಕಾರ್ಪ್ ಜೊತೆಗೆ ಸಂಬಂಧ ಹೊಂದಿದ್ದಾರೆ. ಇದು ಕನಿಷ್ಠ ಏಳು ಅದಾನಿ ಪ್ರವರ್ತಕ ಘಟಕಗಳನ್ನು, ವಿನೋದ್ ಅದಾನಿಗೆ ಸಂಬಂಧಿಸಿದ ಹದಿನೇಳು ಆಫ್‌ಶೋರ್ ಶೆಲ್ ಕಂಪನಿಗಳನ್ನು ಮತ್ತು ಅದಾನಿ ಗ್ರೂಪ್ ಷೇರುಗಳಲ್ಲಿ ಮೂರು ಮಾರಿಷಸ್ ಮೂಲದ ಆಫ್‌ಶೋರ್ ಹೂಡಿಕೆದಾರರನ್ನು ಸ್ಥಾಪಿಸಿದೆ ಎಂದು ಹೇಳಲಾಗಿದೆ", ಎಂದು ರಮೇಶ್ X ನಲ್ಲಿನ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ವಹಿವಾಟುಗಳು ಸೆಬಿ ನಡೆಸುತ್ತಿರುವ ತನಿಖೆಗಳ ಭಾಗವಾಗಿದೆ. ಇವುಗಳು ಮತ್ತು ಇತರ ತೆರಿಗೆ ವಂಚಕರ ದೇಶಗಳು ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳದಿರುವುದು ಮತ್ತು ಭಾರತದ ಒತ್ತಡದ ಕೊರತೆಯಿಂದಾಗಿ ತನಿಖೆಗೆ ಅಡ್ಡಿಯಾಗಿವೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಈ ಬಗ್ಗೆ ಅದಾನಿ ಗ್ರೂಪ್‌ನಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಕಾಂಗ್ರೆಸ್ ಮತ್ತು ಇತರ ಸಂಸ್ಥೆಗಳು ಮಾಡಿದ ಎಲ್ಲಾ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿದೆ.
ಅಮೆರಿಕ ಮೂಲದ ಶಾರ್ಟ್-ಸೆಲ್ಲಿಂಗ್ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್, ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಸಮೂಹ ಸಂಸ್ಥೆಯ ಮೇಲೆ ವಂಚನೆಯ ವಹಿವಾಟುಗಳು ಮತ್ತು ಷೇರು ಬೆಲೆಯಲ್ಲಿ ತಿರಚುವಿಕೆ ಸೇರಿದಂತೆ ಹಲವಾರು ಆರೋಪಗಳನ್ನು ಮಾಡಿತ್ತು. ಆ ಬಳಿಕ ಷೇರು ಪೇಟೆಯಲ್ಲಿ ಅದಾನಿ ಗ್ರೂಪ್ ಷೇರುಗಳ ಮೇಲೆ ಹೊಡೆತ ಬಿದ್ದಿತ್ತು. ಅಂದಿನಿಂದ ಕಾಂಗ್ರೆಸ್ ಸರ್ಕಾರದ ಮೇಲೆ ನಿರಂತರ ದಾಳಿ ನಡೆಸುತ್ತಿದೆ.