×
Ad

H-1B ವೀಸಾ ಶುಲ್ಕ ಹೆಚ್ಚಳ, ಭಾರತ-ಪಾಕ್ ಸಂಘರ್ಷದ ಕುರಿತ ಟ್ರಂಪ್ ಹೇಳಿಕೆ ಬಗ್ಗೆ ಪ್ರಧಾನಿ ಉತ್ತರಿಸುತ್ತಾರೆಯೇ?: ಪ್ರಧಾನಿ ಮೋದಿ ಭಾಷಣಕ್ಕೆ ಮುನ್ನ ಕಾಂಗ್ರೆಸ್ ಪ್ರಶ್ನೆ

Update: 2025-09-21 16:09 IST

ಜೈರಾಮ್ ರಮೇಶ್ (Photo: PTI)

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮುನ್ನ ಕಾಂಗ್ರೆಸ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಿದ್ದಾರೆ. ಈ ವಿವಾದಾತ್ಮಕ ಹೇಳಿಕೆಗೆ ಮೋದಿ ಉತ್ತರಿಸುತ್ತಾರೆಯೇ? ಅಮೆರಿಕದಲ್ಲಿ H-1B ವೀಸಾ ಶುಲ್ಕ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಲಕ್ಷಾಂತರ ಭಾರತೀಯರ ಸಮಸ್ಯೆಯ ಕುರಿತು ಪ್ರಧಾನಿ ಮಾತನಾಡುತ್ತಾರೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಪ್ರಧಾನಿ ಮೋದಿ ರವಿವಾರ ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆದರೆ ಭಾಷಣದ ವಿಷಯವನ್ನು ಬಹಿರಂಗಪಡಿಸಿಲ್ಲ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಧಾನಿ ಮೋದಿ ಮಾತನಾಡಲು ಸಿದ್ಧರಾಗುತ್ತಿದ್ದಂತೆ ವಾಷಿಂಗ್ಟನ್‌ನಲ್ಲಿರುವ ಅವರ ಆಪ್ತ ಸ್ನೇಹಿತ ವ್ಯಾಪಾರವನ್ನು ಮುಂದಿಟ್ಟುಕೊಂಡು ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಿದ್ದೇನೆ ಎಂದು 42ನೇ ಬಾರಿಗೆ ಹೇಳಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಗೆ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಟ್ರಂಪ್ ಹೇಳುತ್ತಿರುವ ಹೇಳಿಕೆಗಳಿಗೆ ಪ್ರಧಾನಿ ಪ್ರತಿಕ್ರಿಯಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

H-1B ವೀಸಾಗೆ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸುವ ಟ್ರಂಪ್ ಆಡಳಿತದ ಇತ್ತೀಚಿನ ನಿರ್ಧಾರದ ಪರಿಣಾಮದ ಬಗ್ಗೆ ಜೈರಾಮ್ ರಮೇಶ್ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ಕ್ರಮವು ಅಮೆರಿಕದಲ್ಲಿರುವ ಭಾರತೀಯರ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.

ಪ್ರಧಾನಿಯವರು ಈ ಗಂಭೀರ ಸಮಸ್ಯೆಗಳನ್ನು ಪರಿಹರಿಸುತ್ತಾರೆಯೇ ಅಥವಾ ಜಿಎಸ್‌ಟಿ ದರ ಕಡಿತದ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿರುವುದರ ಬಗ್ಗೆಯೇ ಮಾತನಾಡುತ್ತಾರ ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News