×
Ad

ಸರ್ವಪಕ್ಷಗಳ ನಿಯೋಗದಲ್ಲಿರುವ ಸಂಸದರನ್ನು ಕಾಂಗ್ರೆಸ್ ಭಯೋತ್ಪಾದಕರೆಂದು ಕರೆದಿದೆ: ಬಿಜೆಪಿ ಆರೋಪ

Update: 2025-05-29 20:16 IST

 ಜೈರಾಮ್ ರಮೇಶ್ | PC : PTI 

ಹೊಸದಿಲ್ಲಿ: ಪಾಕಿಸ್ತಾನದೊಂದಿಗೆ ಭಯೋತ್ಪಾದಕರನ್ನು ಬಯಲು ಮಾಡಲು ವಿದೇಶ ಪ್ರವಾಸದಲ್ಲಿರುವ ಸಂಸದರನ್ನು ಕಾಂಗ್ರೆಸ್ ಭಯೋತ್ಪಾದಕರೊಂದಿಗೆ ಹೋಲಿಕೆ ಮಾಡಿದೆ ಎಂದು ಗುರುವಾರ ಆರೋಪಿಸಿರುವ ಬಿಜೆಪಿ, ಈ ವಿಷಯದ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

“ನೈಜ ಹಾಗೂ ಇನ್ನಿತರ ತುರ್ತು ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜೂನ್ 25-26ರಂದು ತುರ್ತು ಪರಿಸ್ಥಿತಿಯ 50ನೇ ವರ್ಷದ ಅಂಗವಾಗಿ ವಿಶೇಷ ಸಂಸತ್ ಅಧಿವೇಶನವನ್ನು ಆಯೋಜಿಸಲು ಕೇಂದ್ರ ಸರಕಾರ ಪರಿಗಣಿಸುತ್ತಿದೆ” ಎಂದು ವಾಗ್ದಾಳಿ ನಡೆಸಿ, ಮಾತಿನ ನಡುವೆ, “ನಮ್ಮ ಸಂಸದರೂ ತಿರುಗಾಡುತ್ತಿದ್ದಾರೆ, ಭಯೋತ್ಪಾದಕರೂ ತಿರುಗಾಡುತ್ತಿದ್ದಾರೆ” ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ವ್ಯಂಗ್ಯವಾಡಿದ ಬೆನ್ನಿಗೇ ಬಿಜೆಪಿಯಿಂದ ಈ ಆರೋಪ ಕೇಳಿ ಬಂದಿದೆ.

ಜೈರಾಮ್ ರಮೇಶ್ ರ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಝಾದ್ ಪೂನಾವಾಲಾ, “ಪಾಕಿಸ್ತಾನವನ್ನು ವಿದೇಶಗಳಲ್ಲಿ ಬಯಲು ಮಾಡಲು ಪ್ರವಾಸ ಕೈಗೊಂಡಿರುವ ಸರ್ವಪಕ್ಷಗಳ ನಿಯೋಗದ ಸಂಸದರು ವಾಸ್ತವವಾಗಿ ಭಯೋತ್ಪಾದಕರು ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ” ಎಂದು ಕಿಡಿ ಕಾರಿದ್ದಾರೆ.

“ರಾಜತಾಂತ್ರಿಕ ಹೊಡೆತದಿಂದ ಪಾಕಿಸ್ತಾನ ಕಳವಳಕ್ಕೀಡಾಗಿರುವ ಹೊತ್ತಿನಲ್ಲೇ, ಮತ್ತೊಮ್ಮೆ ಪಾಕಿಸ್ತಾನದ ಪರವಾಗಿ ಮಾತನಾಡಲು ಮುಂದಾಗಿರುವ ಕಾಂಗ್ರೆಸ್, ನಮ್ಮ ಸಂಸದರನ್ನು ಭಯೋತ್ಪಾದಕರು ಎಂದು ಕರೆದಿದೆ” ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.

ವಿದೇಶಗಳಿಗೆ ಭೇಟಿ ನೀಡಿರುವ ಸರ್ವಪಕ್ಷಗಳ ನಿಯೋಗದ ಭಾಗವಾದ ಡಿಎಂಕೆಯ ಸಂಸದೆ ಕನಿಮೋಳಿ, ಎನ್ಸಿಪಿ (ಎಸ್ಪಿ)ಯ ಸಂಸದೆ ಸುಪ್ರಿಯಾ ಸುಳೆ ಹಾಗೂ ಸಮಾಜವಾದಿ ಪಕ್ಷದ ಸಂಸದ ರಾಜೀವ್ ಕೂಡಾ ಭಯೋತ್ಪಾದಕರೆ?” ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಆದರೆ, ಬಿಜೆಪಿಯ ಈ ಆರೋಪದ ಕುರಿತು ಕಾಂಗ್ರೆಸ್ ಪಕ್ಷದಿಂದಾಗಲಿ ಅಥವಾ ಜೈರಾಮ್ ರಮೇಶ್ ರಿಂದಾಗಲಿ ಈವರೆಗೆ ಯಾವುದೇ ತಕ್ಷಣದ ಪ್ರತಿಕ್ರಿಯೆ ಹೊರಬಿದ್ದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News