×
Ad

ಮತಗಳ ಕಳ್ಳತನದ ವಿರುದ್ಧ ಅಭಿಯಾನ ತೀವ್ರಗೊಳಿಸಿದ ಕಾಂಗ್ರೆಸ್ : ಹೊಸ ವೀಡಿಯೊ ಬಿಡುಗಡೆ

ಬಿಜೆಪಿಯ ಹಿಡಿತದಿಂದ ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸಲು ಧ್ವನಿಗೂಡಿಸಿ ಎಂದ ಮಲ್ಲಿಕಾರ್ಜುನ ಖರ್ಗೆ

Update: 2025-08-13 19:33 IST

Photo credit:X/@INCIndia

ಹೊಸದಿಲ್ಲಿ: ನಕಲಿ ಮತಗಳು ಹೇಗೆ ಚಲಾವಣೆಯಾಗುತ್ತಿವೆ ಎಂಬುದನ್ನು ವಿವರಿಸುವ ಹೊಸ ವೀಡಿಯೊ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಬುಧವಾರ “ಮತಗಳ ಕಳ್ಳತನ” ವಿರುದ್ಧ ಅಭಿಯಾನವನ್ನು ಚುರುಕುಗೊಳಿಸಿದೆ. ಬಿಜೆಪಿಯ ಹಿಡಿತದಿಂದ ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸಲು ಜನರು ಧ್ವನಿಗೂಡಿಸಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಅಭಿಯಾನದ ಭಾಗವಾಗಿ ಎಕ್ಸ್‌ನಲ್ಲಿ ಒಂದು ನಿಮಿಷದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ನಿಮ್ಮ ಮತದ ಕಳ್ಳತನ, ನಿಮ್ಮ ಹಕ್ಕುಗಳ ಕಳ್ಳತನ, ನಿಮ್ಮ ಗುರುತಿನ ಕಳ್ಳತನ!” ಎಂದು ಬರೆದುಕೊಂಡಿದ್ದಾರೆ.

“ಬೂತ್ ಪರ್ ವೋಟ್ ಚೋರಿ” ಎಂಬ ಶೀರ್ಷಿಕೆಯ ವೀಡಿಯೊವನ್ನು ಟ್ಯಾಗ್ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಿಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡಬೇಡಿ. ಈ ಬಾರಿ ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ನೀಡುವಂತೆ ಆಗ್ರಹಿಸಿ, ಮತಗಳ್ಳತನದ ವಿರುದ್ಧ ಧ್ವನಿ ಎತ್ತಿ. ಬಿಜೆಪಿಯ ಹಿಡಿತದಿಂದ ಸಾಂವಿಧಾನಿಕ ಸಂಸ್ಥೆಗಳನ್ನು ಮುಕ್ತಗೊಳಿಸಿ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ರಾಹುಲ್‌ ಗಾಂಧಿ ಹಂಚಿಕೊಂಡ ವಿಡಿಯೋದಲ್ಲಿ ದಂಪತಿ ಮತಗಟ್ಟೆಗೆ ಪ್ರವೇಶಿಸುತ್ತಿರುವುದು, ಆಗ ಕೇಸರಿ ಶಾಲು ಧರಿಸಿದ ಇಬ್ಬರು ವ್ಯಕ್ತಿಗಳು ದಂಪತಿಯನ್ನು ತಡೆದು ನಿಮ್ಮ ಮತಗಳನ್ನು ಈಗಾಗಲೇ ಚಲಾಯಿಸಲಾಗಿದೆ ನೀವು ವಾಪಾಸ್ಸು ಹೋಗಿ ಎಂದು ಹೇಳುತ್ತಿರುವುದು ಕಂಡು ಬಂದಿದೆ.

"ಮತಗಳ ಕಳ್ಳತನ" ಎಂಬುದು "ಮಾಡು ಇಲ್ಲವೇ ಮಡಿ" ವಿಷಯ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ದೇಶಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಆ.14ರಂದು ರಾತ್ರಿ 8 ಗಂಟೆಗೆ 'ವೋಟ್ ಚೋರ್, ಗಾಧಿ ಛೋಡ್' ಮೊಂಬತ್ತಿ ಜಾಥಾ ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಆಗಸ್ಟ್ 22 ರಿಂದ ಸೆ.7ರ ನಡುವೆ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಬೃಹತ್ ಮೆರವಣಿಗೆಗಳನ್ನು ನಡೆಸಲು ನಿರ್ಧರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News