ಪ್ರಧಾನಿ ಮೋದಿ ಚಹಾ ಮಾರಾಟ ಮಾಡುತ್ತಿರುವ ಎಐ ವಿಡಿಯೋ ಪೋಸ್ಟ್ ಮಾಡಿದ ಕಾಂಗ್ರೆಸ್ ನಾಯಕಿ; ಬಿಜೆಪಿ ಟೀಕೆ
Screengrab:X/@NayakRagini
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಹಾಸಿನ ಕಾರ್ಯಕ್ರಮವೊಂದರಲ್ಲಿ ಚಹಾ ಮಾರಾಟ ಮಾಡುತ್ತಿರುವುದನ್ನು ತೋರಿಸುವ ಎಐ ವೀಡಿಯೊವನ್ನು ಕಾಂಗ್ರೆಸ್ ನಾಯಕಿಯೊಬ್ಬರು ಹಂಚಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಎಐಸಿಸಿ ರಾಷ್ಟ್ರೀಯ ವಕ್ತಾರೆ ಡಾ. ರಾಗಿಣಿ ನಾಯಕ್ ಅವರು ಈ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ, ಇದನ್ನು ಯಾರು ಮಾಡಿದರು? ಎಂದು ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಈ ಹಿಂದೆ ಗುಜರಾತ್‌ನ ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಿರುವುದಾಗಿ ಪ್ರಧಾನಿ ಮೋದಿ ಹೇಳಿಕೊಂಡಿದ್ದರು. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಬಿಜೆಪಿ ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ. ಕಾಂಗ್ರೆಸ್ ಪ್ರಧಾನಿಗೆ ನಿಂದನೆ ಮಾಡಿದೆ ಎಂದು ಆರೋಪಿಸಿದೆ.
ವೀಡಿಯೊದಲ್ಲಿ ಪ್ರಧಾನಿ ಮೋದಿ ತಿಳಿ ನೀಲಿ ಬಣ್ಣದ ಕೋಟು ಮತ್ತು ಕಪ್ಪು ಪ್ಯಾಂಟ್ ಧರಿಸಿ ಕೆಂಪು ಹಾಸಿನ ಕಾರ್ಯಮದಲ್ಲಿ ಟೀ ಮತ್ತು ಗ್ಲಾಸ್ ಹಿಡಿದುಕೊಂಡು ಚಹಾ ಮಾರಾಟ ಮಾಡುತ್ತಿರುವುದನ್ನು ಎಐ ಚಿತ್ರದಲ್ಲಿ ತೋರಿಸಲಾಗಿದೆ. ವೀಡಿಯೊದ ಹಿಂಬದಿಯಲ್ಲಿ ಭಾರತದ ರಾಷ್ಟ್ರಧ್ವಜ ಸೇರಿದಂತೆ ಹಲವು ದೇಶಗಳ ಧ್ವಜಗಳಿರುವುದು ಕಂಡು ಬಂದಿದೆ. ಪ್ರಧಾನಿ ಮೋದಿಯವರನ್ನು ಅನುಕರಿಸುವ ಧ್ವನಿಯಲ್ಲಿ ʼಚಾಯ್ ಬೋಲೋ, ಚಾಯ್ ಎಂದು ಹೇಳುತ್ತಿರುವುದು ಎಐ ರಚಿತ ವೀಡಿಯೊದಲ್ಲಿ ಕೇಳಿಸುತ್ತಿದೆ.
ಬಿಜೆಪಿ ವಕ್ತಾರ ಶೆಹಝಾದ್ ಪೂನಾವಾಲಾ ಈ ಕುರಿತು ಪ್ರತಿಕ್ರಿಯಿಸಿದ್ದು, ರೇಣುಕಾ ಚೌಧರಿ ಸಂಸತ್ ಮತ್ತು ಸೇನೆಯನ್ನು ಅವಮಾನಿಸಿದ ಬೆನ್ನಲ್ಲೆ ರಾಗಿಣಿ ನಾಯಕ್ ಪ್ರಧಾನಿ ಮೋದಿ ಅವರನ್ನು ಲೇವಡಿ ಮಾಡಿದ್ದಾರೆ. ಒಬಿಸಿ ಸಮುದಾಯದಿಂದ ಬಂದು ಕಷ್ಟಪಟ್ಟು ಉನ್ನತ ಸ್ಥಾನಕ್ಕೆ ಬಂದ ಪ್ರಧಾನಿಯನ್ನು ಈ ಧನಿಕ ಕಾಂಗ್ರೆಸ್ ಒಪ್ಪಲಾರದು. ಇದಕ್ಕೂ ಮೊದಲು ಅವರು ‘ಚಾಯ್‌ವಾಲಾ’ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. 150 ಕ್ಕಿಂತ ಹೆಚ್ಚು ಬಾರಿ ನಿಂದಿಸಿದ್ದಾರೆ. ಬಿಹಾರದಲ್ಲಿ ಅವರ ತಾಯಿಯನ್ನೂ ಗುರಿಯಾಗಿಸಿದ್ದಾರೆ. ಜನ ಇದನ್ನು ಎಂದೂ ಕ್ಷಮಿಸುವುದಿಲ್ಲ ಎಂದು ಹೇಳಿದರು.
अब ई कौन किया बे 🥴🤣 pic.twitter.com/mbVsykXEgm
— Dr. Ragini Nayak (@NayakRagini) December 2, 2025